ವಿನಾಶದಂಚಿನಲ್ಲಿರುವ ಸಿಂಗಳಿಕ
ಕಾರವಾರ,ಎ.30: ಜಗತ್ತಿನಾದ್ಯಂತ ವಿನಾಶದ ಅಂಚಿನಲ್ಲಿರುವ 25 ಪ್ರಮುಖ ಪ್ರಾಣಿ ಸಂಕುಲಗಳಲ್ಲಿ ಸಿಂಗಳಿಕ ಕೂಡ ಒಂದಾಗಿದೆ. ಜಿಲ್ಲೆಯ ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಶಿರಸಿ, ಗೇರುಸೊಪ್ಪ ಹಾಗೂ ಹೊನ್ನಾವರ ಭಾಗಗಳಲ್ಲಿ ಸಿಂಹದ ರೀತಿಯ ಬಾಲವುಳ್ಳ ಕೋತಿಗಳು (ಸಿಂಗಳಿಕಗಳು) ಇತ್ತೀಚೆಗೆ ಒಂದೆರಡು ಗುಂಪುಗಳಲ್ಲಿ ಕಂಡು ಬಂದಿದ್ದು, ಅವುಗಳ ನಿಚ್ಚಳ ಸಂಖ್ಯೆ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಶಿರಸಿ ಅರಣ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಜಗತ್ತಿನಲ್ಲಿ 2012 ರಲ್ಲಿ ಸಮೀಕ್ಷೆ ನಡೆಸಿದಾಗ 25 ಪ್ರಾಣಿ ಸಂಕುಲಗಳು ವಿನಾಶದ ಅಂಚಿನಲ್ಲಿರುವುದರ ಬಗ್ಗೆ ಯುನೆಸ್ಕೊ ವತಿಯಿಂದ ಯಾದಿ ಬಿಡುಗಡೆಗೊಳಿಸಲಾಗಿತ್ತು. ಆ ಯಾದಿಯಲ್ಲಿ ಪ್ರಮುಖವಾಗಿ ಸಿಂಹದ ರೀತಿಯ ಬಾಲವುಳ್ಳ ಕೋತಿಗಳು (ಸಿಂಗಳಿಕ )ಪ್ರಾಣಿಯನ್ನು ಗುರುತಿಸಲಾಗಿತ್ತು. ಅದಕ್ಕೂ ಮುನ್ನ ಕೇರಳದಲ್ಲಿ ಕೋತಿ ಸಂಕುಲಕ್ಕೆ ಸೇರಿದ ಸಿಂಗಳಿಕದ ರಕ್ಷಣೆಗೋಸ್ಕರ 1980 ರಲ್ಲಿ ಸೇವ್ ಸೈಲೆಂಟ್ ವ್ಯಾಲಿ ಮೂವ್‌ಮೆಂಟ್ ಹೆಸರಿನಲ್ಲಿ ಆಂದೋಲನ ನಡೆಸಲಾಗಿತ್ತು. ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಕೇರಳದ ಈ ಭಾಗ ಹಾಗೂ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಗೇರುಸೊಪ್ಪ, ಹೊನ್ನಾವರ ಭಾಗಗಳಲ್ಲಿ ಬಿಟ್ಟರೆ, ದೇಶದ ಬೇರೆಡೆ ಈ ಪ್ರಾಣಿಗಳು ಕಾಣಲು ಸಿಗುವುದು ಅಪರೂಪವಾಗಿದೆ. ಜಿಲ್ಲೆಯ ಅರಣ್ಯ ಪ್ರವಾಸೋದ್ಯಮದಲ್ಲಿ ಐದು ಪ್ರಮುಖ ಪ್ರಾಣಿ ಪ್ರಭೇದಗಳಲ್ಲಿ ಹಾರ್ನ್‌ಬಿಲ್, ಬ್ಲ್ಯಾಕ್ ಪೆಂಥರ್, ಕಿಂಗ್ ಕೋಬ್ರಾ, ಸ್ಟಾರ್ ಚುಕ್ಕಿಯ ಆಮೆಗಳ ಜೊತೆಗೆ ಸಿಂಹದ ರೀತಿಯ ಬಾಲವುಳ್ಳ ಕೋತಿಗಳು (ಸಿಂಗಳಿಕ) ಕೂಡ ಸ್ಥಾನವನ್ನು ಪಡೆದುಕೊಂಡಿವೆೆ. ಅಘನಾಶಿನಿ ನದಿ ಪಾತ್ರದ ಕಣಿವೆಗಳಲ್ಲಿ ಹೆಚ್ಚಾಗಿ ಕಂಡು ಬರುವ ಈ ಪ್ರಾಣಿಗಳು,ಕೆಲವು ಜನರು ಆಹಾರಕ್ಕಾಗಿ ಭೆೇಟೆಯಾಡುವುದರಿಂದ ಮತ್ತು ಕಾಡಿನಲ್ಲಿ ಮನುಷ್ಯರ ಓಡಾಟ ಹೆಚ್ಚಾಗಿರುವುದು ಹಾಗೂ ಕಾಡಿನ ನಾಶದಿಂದ ಅವುಗಳ ಸಂಖ್ಯೆಯಲ್ಲಿ ವಿಪರೀತವಾಗಿ ಇಳಿಕೆ ಕಂಡು ಬಂದಿದೆ. ಹೀಗೆಯೇ ಮುಂದುವರಿದರೆ ಮುಂದೆ ಕೆಲವೇ ವರ್ಷಗಳಲ್ಲಿ ಈ ಪ್ರಾಣಿ ಸಂಕುಲ ಲುಪ್ತವಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆಯ ಸಂದೇಶದ ಜೊತೆಗೆ ವರದಿಯನ್ನು ಕೂಡ ಸರಕಾರಕ್ಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇವುಗಳ ಸಂರಕ್ಷಣೆಗೆ ಸರಕಾರ ಮುತುವರ್ಜಿ ವಹಿಸಿ 2012 ರಲ್ಲಿಯೇ ಪಶ್ಚಿಮ ಘಟ್ಟದ ಅಂದಾಜು 299.52 ಚದರ ಕಿ.ಮೀ. ಭಾಗವನ್ನು ರಕ್ಷಿತಾರಣ್ಯವೆಂದು ಘೋಷಿಸಿತು.ಅಲ್ಲದೇ ಈ ಭಾಗವನ್ನು ಕತ್ತಲೆ ಕಾನು ಎಂದು ಕರೆಯಲಾಗಿದ್ದು, ಈ ಭಾಗದಲ್ಲಿ ಮನುಷ್ಯರ ಓಡಾಟ, ಬೆೆೇಟೆಯಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇದಕ್ಕೆ ಪ್ರಮುಖವಾಗಿ 2007 ರಲ್ಲಿ ಅಂದಿನ ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್ ಮೋಹನ್‌ರಾಜ್ ಅವ, ನೆರವಿನಲ್ಲಿ ತಮಿಳುನಾಡಿನ ಸಲೀಮ್ ಅಲಿ ಕೇಂದ್ರದ ಪಕ್ಷಿ ಹಾಗೂ ಪರಿಸರ ಶಾಸ್ತ್ರ ವಿಭಾಗದ ವಿಜ್ಞಾನಿ ಡಾ.ಹೊನ್ನವಳ್ಳಿಕುಮಾರ್ ಈ ಬಗ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಂಹದ ರೀತಿಯ ಬಾಲವುಳ್ಳ ಕೋತಿಗಳ (ಸಿಂಗಳಿಕದ) ಬಗ್ಗೆ ಅಧ್ಯಯನ ನಡೆಸಿ, ಇದರ ಸಂರಕ್ಷಣೆಗೆ ಸರಕಾರಕ್ಕೆ ವಿಸ್ತೃತವಾದ ವರದಿ ನೀಡಿದ್ದರು ಎಂದು ಮಾಹಿತಿ ನೀಡಿದರು. ಹೀಗಾಗಿ ಅವರ ವರದಿ ಆಧಾರದಲ್ಲಿ ಅರಣ್ಯ ರಕ್ಷಣೆಯ ಜೊತೆಗೆ ರಕ್ಷಿತಾರಣ್ಯದಲ್ಲಿ ಪ್ರಸ್ತುತ ಅವುಗಳ ನಿಖರವಾದ ಸಂಖ್ಯೆ ತಿಳಿಯಲು ಮರುಸಮೀಕ್ಷೆ ನಡೆಸುವಂತೆ ಸರಕಾರ ಆದೇಶ ನೀಡಿದೆ. ಹಾಗಾಗಿ ಅರಣ್ಯ ಇಲಾಖೆ ಮರುಸಮೀಕ್ಷೆಗೆ ತಯಾರಿ ನಡೆಸಿದೆ. ಆದ್ದರಿಂದ ಅರಣ್ಯ ಸಂರಕ್ಷಣೆಯ ಜೊತೆ ಜೊತೆಗೆನೇ ವಿನಾಶದ ಅಂಚಿನಲ್ಲಿರುವ ಈ ಪ್ರಾಣಿ ಸಂಕುಲದ ಸಂರಕ್ಷಣೆಯ ಜವಾಬ್ದಾರಿ ಅರಣ್ಯ ಇಲಾಖೆಯ ಮೇಲಿದೆ.
ಸಿಂಹದ ರೀತಿಯ ಬಾಲವುಳ್ಳ ಕೋತಿ (ಸಿಂಗಳಿಕ) ಪ್ರಾಣಿ ಸಂತತಿಯ ವಿನಾಶಕ್ಕೆ ಕಾರಣ ತಿಳಿಯುವುದಲ್ಲದೇ, ಕಾಡಿನಲ್ಲಿ ಅವುಗಳ ಚಟುವಟಿಕೆ ಹಾಗೂ ನಿಖರವಾದ ಸಂಖ್ಯೆ ಕಂಡು ಹಿಡಿಯುವುದೇ ಸಮೀಕ್ಷೆಯ ಮುಖ್ಯ ಉದ್ದೇಶವಾಗಿದೆ. ಹಿಂದಿನ ಸಮೀಕ್ಷೆಯಲ್ಲಿ 30 ಇದ್ದ ಇವುಗಳ ಸಂಖ್ಯೆ,ಸದ್ಯ 60 ಕ್ಕೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.