ಸಿಎಂ ಹುದ್ದೆ ದಲಿತರಿಗೆ ನೀಡಲು ನಿರ್ಧರಿಸಿದರೆ ಅಚ್ಚರಿ ಇಲ್ಲ: ಡಾ. ಮೋಟಮ್ಮ
ಮೂಡಿಗೆರೆ, ಎ.30: ‘ಒಂದೊಮ್ಮೆ ಮುಖ್ಯಮಂತ್ರಿ ಹುದ್ದೆ ದಲಿತರಿಗೆ ನೀಡಲು ಹೈಕಮಾಂಡ್ ನಿರ್ಧರಿಸಿದರೆ ಅಚ್ಚರಿ ಇಲ್ಲ. ಆ ಹುದ್ದೆ ನಮ್ಮ ಪಾಲಿಗೆ ಗಗನ ಕುಸುಮ ಇದ್ದಂತೆ. ನಾವು ಆ ಮಟ್ಟದಲ್ಲಿ ಯೋಚಿಸಿಲ್ಲ’ ಎಂದು ಎಂಎಲ್ಸಿ ಡಾ. ಮೋಟಮ್ಮ ತಿಳಿಸಿದ್ದಾರೆ.
ಅವರು ಪಟ್ಟಣದ ಲ್ಯಾಂಪ್ಸ್‌ಸೊಸೈಟಿ ಕಟ್ಟಡದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಲಿತರನ್ನು ಮುಖ್ಯಮಂತ್ರಿ ಮಾಡಲು ಹೈಕಮಾಂಡ್ ನಿರ್ಧಾರ ಕೈಗೊಂಡಿಲ್ಲ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಹೈಕಮಾಂಡ್ ದೂರವಿಟ್ಟಿಲ್ಲ. ಬದಲಿಗೆ ಹತ್ತಿರವೇ ಇಟ್ಟುಕೊಂಡಿದೆ ಎಂದರು. ನಿಮ್ಮನ್ನೂ ಹೈಕಮಾಂಡ್ ದೂರವಿಟ್ಟಿಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡದೆ ವೌನ ವಹಿಸಿದರು.
ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿ ಹುದ್ದೆ ಕೇಳುವುದರಲ್ಲಿ ತಪ್ಪಿಲ್ಲ. ಎಲ್ಲದಕ್ಕೂ ಕಾಲವೆಂಬುದು ಕೂಡಿ ಬರಬೇಕಲ್ಲವೇ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಕಾಂಗ್ರೆಸ್‌ನ ಕೆಲ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂಬುದು ಸುಳ್ಳು. ಅಂತಹ ಬೆಳವಣಿಗೆ ಕಾಂಗ್ರೆಸ್‌ನಲ್ಲಿ ನಡೆದೇ ಇಲ್ಲ ಎಂದು ಹೇಳಿದರು. ಪಕ್ಷದ ಎಲ್ಲ ನಿರ್ಧಾರಗಳೂ ಹೈಕಮಾಂಡ್ನಲ್ಲೇ ಆ
ಗುತ್ತದೆ. ಆದ್ದರಿಂದ ಹೈಕಮಾಂಡ್ ಮೂಲದಿಂದ ಸಿದ್ದರಾಮಯ್ಯ ಹುದ್ದೆಗೆ ಗಂಡಾಂತರವಿಲ್ಲ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ತಮಗೆ ಮಾಹಿತಿಯಿಲ್ಲ ಎಂದು ತಿಳಿಸಿದರು. ತಾವು ಆಗಾಗ ದೆಹಲಿಗೆ ತೆರಳುತ್ತಿದ್ದು, ಅಲ್ಲಿಗೆ ಹೋದಾಗಲೆಲ್ಲಾ ಕಾಂಗ್ರೆಸ್‌ನ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸಹಜವಾಗಿ ಭೇಟಿಯಾಗುತ್ತೇನೆ. ನನ್ನ ಇತ್ತೀಚಿನ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಹೇಳಿದರು. ಅಡ್ಯಂತಾಯ ರಂಗಮಂದಿರದಲ್ಲಿ ಪರಿಶಿಷ್ಟ ಮಹಿಳಾ ವಿವಿಧೋ ದ್ದೇಶ ಪತ್ತಿನ ಸಹಕಾರಿ ಸಂಘ ಸ್ಥಾಪನೆಯಾಗಲಿದ್ದು, ಸಹಕಾರಿ ಸಚಿವ ಮಹದೇವಪ್ರಸಾದ್ ಮೇ 2ರಂದು ಉದ್ಘಾಟಿಸಲಿದ್ದಾರೆ. ತಾನು ಸೇರಿದಂತೆ ಶಾಸಕ ಬಿ.ಬಿ.ನಿಂಗಯ್ಯ ಮತ್ತು ಎಂಎಲ್ಸಿ ಎಂ.ಕೆ. ಪ್ರಾಣೇಶ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಎಂ.ಎಸ್.ಅನಂತ್, ಪಟ್ಟಣ ಪಂಚಾಯತ್ ನಾಮ ನಿರ್ದೇಶಿತ ಸದಸ್ಯ ಹೊಸಕೆರೆ ರಮೇಶ್ ಉಪಸ್ಥಿತರಿದ್ದರು.