ಮದ್ಯದಂಗಡಿಗೆ ಅನುಮತಿ ನೀಡದಿರಲು ಗ್ರಾಮಸ್ಥರ ಒತ್ತಾಯ
ಚಿಕ್ಕಮಗಳೂರು, ಎ.30: ಅಬಕಾರಿ ಇಲಾಖೆಯಿಂದ ಉಪ್ಪಳ್ಳಿಯಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದ್ದು, ಕೂಡಲೆ ಪರವಾನಿಗೆ ರದ್ದುಪಡಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶನಿವಾರ ಗೃಹ ಮಂಡಳಿ ಬಡಾವಣೆಯಲ್ಲಿರುವ ಅಬಕಾರಿ ನಿರೀಕ್ಷಕರ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಮಾತನಾಡಿ, ನಗರ ಹೊರವಲಯದ ಉಪ್ಪಳ್ಳಿ ಎಲ್ಲ ಕೋಮಿನ ಜನಾಂಗ ವಾಸಿಸುವ ಸೂಕ್ಷ್ಮ ಪ್ರದೇಶವಾಗಿದೆ. ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳ್ವೆ ಮಾಡುತ್ತಿದ್ದಾರೆ. ಇಲ್ಲಿ ಸಭೆ ಸಮಾರಂಭಗಳು ನಡೆಯುತ್ತಿರುತ್ತಿದ್ದು, ಯುವ ಸಮೂಹಗಳು ಪಾಲ್ಗೊಳ್ಳುತ್ತವೆ. ಮದ್ಯದಂಗಡಿ ತೆರೆಯಲು ಅವಕಾಶ ಕೊಟ್ಟರೆ ಯುವ ಸಮೂಹ ಸೇರಿದಂತೆ ಬಡಕುಟುಂಬಗಳು ಮದ್ಯವ್ಯಸನಿಗಳಾಗಿ ಬೀದಿ ಪಾಲಾಗುವುದರಲ್ಲಿ ಸಂದೇಹವಿಲ್ಲ. ಈ ಸಂಬಂಧ ಅಬಕಾರಿ ಇಲಾಖೆ ಉಪ್ಪಳ್ಳಿಗೆ ನೀಡಿರುವ ಪರವಾನಿಗೆಯನ್ನು ಕೂಡಲೆ ರದ್ದು ಪಡಿಸುವಂತೆ ಒತ್ತಾಯಿಸಿದರು.
ಕೂಲಿ ಕಾರ್ಮಿಕರು, ಹಣ್ಣು, ತರಕಾರಿ ಹಾಗೂ ಚಿಲ್ಲರೆ ವ್ಯಾಪಾರ ಮಾಡುವ ಕುಟುಂಬಗಳು ಹೆಚ್ಚಾಗಿದ್ದು, ಮದ್ಯದಂಗಡಿ ತೆರೆದರೆ ದುಶ್ಚಟಕ್ಕೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ತಿಳಿಸಿದ್ದಾರೆ.
ಈ ವೇಳೆ ಫಯಾಝ್, ಗಂಗಾಧರ್, ನದೀಮ್, ಬಾಲರಾಜ್‌ಗೌಡ, ಅಕ್ಷಯ್‌ಕುಮಾರ್, ರಹ್ಮಾನ್ ಮತ್ತಿತರರು ಉಪಸ್ಥಿತರಿದ್ದರು.