×
Ad

ಭೀಕರ ರಸ್ತೆ ಅಪಘಾತ: ವಿದ್ಯಾರ್ಥಿನಿಯರು ಸೇರಿ 9 ಮಂದಿ ಮೃತ್ಯು

Update: 2016-04-30 23:49 IST

ಚಿತ್ರದುರ್ಗ, ಎ.30: ಇಲ್ಲಿನ ಚಳ್ಳಕೆರೆ ಸಮೀಪದ ಹೆಗ್ಗೆರೆ ಗೇಟ್ ಸಮೀಪ ಕೆಎಸ್ಸಾರ್ಟಿಸಿ ಮತ್ತು ಕ್ರೂಸರ್ ನಡುವಿನ ಭೀಕರ ಅಪಘಾತದಲ್ಲಿ 8 ವಿದ್ಯಾರ್ಥಿನಿಯರು ಸೇರಿದಂತೆ 9 ಮಂದಿ ಸಾವನ್ನಪ್ಪಿದ ದುರ್ಘಟನೆ ಶನಿವಾರ ಬೆಳಗಿನಜಾವ ಸಂಭವಿಸಿದೆ.

ಕಂಪ್ಯೂಟರ್ ಶಿಕ್ಷಣದ ನಂತರ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗವನ್ನು ಪಡೆಯುವ ಮಹದಾಸೆಯಿಂದ ಸಂದರ್ಶನ ಮುಗಿಸಿ ಕ್ರೂಸರ್‌ನಲ್ಲಿ ಊರಿಗೆ ವಾಪಸ್ ತೆರಳುತ್ತಿದ್ದ ವಿದ್ಯಾರ್ಥಿನಿಯರು ಚಾಲಕನ ಅಜಾಗರೂಕತೆಯಿಂದ ಅಪಘಾತಕ್ಕೀಡಾಗಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ.

ಕ್ರೂಸರ್ ಚಾಲಕ ಬಳ್ಳಾರಿಯ ಆರ್.ಚಂದ್ರೇಗೌಡ(25), ವಿದ್ಯಾರ್ಥಿನಿಯರಾದ ಸಿರುಗುಪ್ಪ ಮೂಲದ ಶಾಂತಿ(20), ಡಿ.ಸುಧಾ(21), ಸರಿತಾ(22), ಜಯಶ್ರೀ (21), ಭಾರತಿ(21), ಅರ್ಹತಾ (20), ಶೃತಿ(21) ಹಾಗೂ ಕಾವ್ಯಾ(20) ಮೃತಪಟ್ಟಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳ್ಳಾರಿಯ ಎಸ್‌ಜಿಟಿ ಕಾಲೇಜಿನ 12 ವಿದ್ಯಾರ್ಥಿನಿಯರ ತಂಡ ಅಲ್ಲಿನ ಪರಿಪೂರ್ಣ ಇನ್‌ಫೋ ಸೆಂಟರ್‌ನಲ್ಲಿ ಕಂಪ್ಯೂಟರ್ ಶಿಕ್ಷಣ ಮುಗಿಸಿ ಸೆಂಟರ್ ವ್ಯವಸ್ಥಾಪಕ ಪ್ರದೀಪ್ ನೇತೃತ್ವದಲ್ಲಿ ಎ.28ರಂದು ಬೆಂಗಳೂರಿಗೆ ತೆರಳಿ ಅಲ್ಲಿ ಸಂದರ್ಶನವೊಂದಕ್ಕೆ ಹಾಜರಾಗಿ ವಾಪಸ್ ತೆರಳುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ ಎಂದು ತಿಳಿಸಲಾಗಿದೆ.

ಇದೇ ಘಟನೆಯಲ್ಲಿ ಪ್ರದೀಪ್(28), ಜ್ಯೋತಿ(19), ನಾಗರತ್ನಾ(20), ರೇಣುಕಾ (20), ಸುನೀತಾ(21), ಹುಲಿಗಮ್ಮ(21), ಕೆಎಸ್ಸಾರ್ಟಿಸಿ ಬಸ್ಸಿನ ಚಾಲಕ ಮಹಮ್ಮದ್ ಹುಸೈನ್(38) ಗಂಭೀರವಾಗಿ ಗಾಯ ಗೊಂಡಿದ್ದಾರೆ. ಆ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಭೀಕರ ಸ್ವರೂಪದ ಅಪಘಾತದಲ್ಲಿ ಕ್ರೂಸರ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಸುದ್ದಿ ತಿಳಿದ ಕೂಡಲೇ ವೃತ್ತ ನಿರೀಕ್ಷಕ ಕೆ.ಸಮೀವುಲ್ಲಾ, ಪಿಎಸ್ಸೈ ವೆಂಕಟೇಶ್, ರುದ್ರಪ್ಪ, ಬಸವರಾಜು ಸೇರಿದಂತೆ ಪೊಲೀಸರು ತೆರಳಿ ಸ್ಥಳಕ್ಕೆ ಆ್ಯಂಬುಲೆನ್ಸ್ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತದೇಹಗಳನ್ನು ಚಳ್ಳಕೆರೆ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದ ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಪ್ರಕರಣ ಸಂಬಂಧ ಚಳ್ಳಕೆರೆ ಗ್ರಾಮಾಂತರ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News