ಇನ್ವೆಸ್ಟ್ ಕರ್ನಾಟಕ ಕಂಪೆನಿ ಸ್ಥಾಪನೆಗೆ ನಿರ್ಧಾರ

Update: 2016-04-30 18:20 GMT

ಬೆಂಗಳೂರು, ಎ.30: ವಿದೇಶಗಳಿಂದ ರಾಜ್ಯಕ್ಕೆ ಬಂಡವಾಳವನ್ನು ಆಕರ್ಷಿಸಲು ಇನ್ವೆಸ್ಟ್ ಕರ್ನಾಟಕ ಕಂಪೆನಿಯನ್ನು ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ನಡೆದ ರಾಜ್ಯಮಟ್ಟದ ಏಕಗವಾಕ್ಷಿಗೆ ಒಪ್ಪಿಗೆ ನೀಡಿಕೆ ಸಮಿತಿ (ಎಸ್‌ಎಲ್‌ಎಸ್‌ಡಬ್ಲುಸಿಸಿ) ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಇನ್ವೆಸ್ಟ್ ಕರ್ನಾಟಕ ಕಂಪೆನಿಯು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದ್ದು, ವಿದೇಶಗಳಿಂದ ಬಂಡವಾಳ ಆಕರ್ಷಿಸಲು ಶ್ರಮಿಸಲಿದೆ. ಭಾರತದಲ್ಲೇ ಮೊದಲ ಬಾರಿಗೆ ಇಂತಹ ಸಂಸ್ಥೆಯನ್ನು ಆರಂಭಿಸಲಾಗುತ್ತಿದೆ. ಉದ್ಯೋಗ ಮಿತ್ರ ಸಂಸ್ಥೆಯು ಅಸ್ತಿತ್ವದಲ್ಲಿರಲಿದೆ. ಇನ್ವೆಸ್ಟ್ ಕರ್ನಾಟಕ ಕಂಪೆನಿಯಲ್ಲಿ ಸರಕಾರಿ ಹಾಗೂ ಖಾಸಗಿ ವಲಯದವರು ಕಾರ್ಯನಿರ್ವಹಿಸಲಿದ್ದಾರೆ ಎಂದು ದೇಶಪಾಂಡೆ ಹೇಳಿದರು.
3,028 ಕೋಟಿ ರೂ.ಬಂಡವಾಳ ಹೂಡಿಕೆಯ 7,114 ಉದ್ಯೋಗಗಳು ಸೃಷ್ಟಿಯಾಗುವ 32 ಹೊಸ ಯೋಜನೆಗಳು ಹಾಗೂ 8 ವಿಸ್ತರಣಾ ಯೋಜನೆಗಳಿಗೆ ಇಂದಿನ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ದೇಶಪಾಂಡೆ ತಿಳಿಸಿದರು.
ಬಾಗಲಕೋಟೆ, ಬೆಳಗಾವಿ, ಬೀದರ್, ಚಿಕ್ಕಬಳ್ಳಾಪುರದಲ್ಲಿ ತಲಾ ಒಂದು, ದಕ್ಷಿಣ ಕನ್ನಡ ಹಾಗೂ ಮೈಸೂರಿನಲ್ಲಿ ತಲಾ 2, ಕಲಬುರಗಿ, ಕೊಡಗು ಜಿಲ್ಲೆಗಳಲ್ಲಿ ತಲಾ 3, ಬೆಂಗಳೂರು ನಗರ, ತುಮಕೂರುಗಳಲ್ಲಿ ತಲಾ 4 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ 12 ಯೋಜನೆಗಳು ಸೇರಿದಂತೆ ಒಟ್ಟು 34 ಹೊಸ ಯೋಜನೆಗಳಿಗೆ ಅನುಮತಿ ನೀಡಲಾಗಿದೆ.
ವಿಸ್ತರಣಾ ಯೋಜನೆಗಳು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೂರು, ಬೆಂಗಳೂರು ನಗರ, ಚಾಮರಾಜನಗರ ಹಾಗೂ ತುಮಕೂರಿನಲ್ಲಿ ತಲಾ ಒಂದು ಹಾಗೂ ಮೈಸೂರಿನಲ್ಲಿ ಎರಡು ಯೋಜನೆಗಳು ಸೇರಿದಂತೆ ಒಟ್ಟು 8 ವಿಸ್ತರಣಾ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. 449 ಕೋಟಿ ರೂ.ಬಂಡವಾಳದ ಈ ಯೋಜನೆಗಳಿಂದ 939 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರದ 87 ಕೋಟಿ ರೂ.ಅನುದಾನದಲ್ಲಿ ಸೆಂಟ್ರಲ್ ಇನ್‌ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆಯು ಆರಂಭಿಸಲು ಉದ್ದೇಶಿಸಿರುವ ಆಧುನಿಕ ಪಾಲಿಮೆರ್ ವಿನ್ಯಾಸ ಹಾಗೂ ಅಭಿವೃದ್ಧಿ, ಸಂಶೋಧನಾ ಪ್ರಯೋಗಾಲಯಕ್ಕೆ ದೇವನಹಳ್ಳಿಯಲ್ಲಿ ಕೆಐಎಡಿಬಿಗೆ ಸೇರಿದ 5 ಎಕರೆ ಜಾಗವನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ದೇಶಪಾಂಡೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News