ಶಿವಮೊಗ್ಗ: 44 ಅಧಿಕಾರಿಗಳಿಂದ ಗ್ರಾಮ ವಾಸ್ತವ್ಯ

Update: 2016-05-01 13:53 GMT

ಶಿವಮೊಗ್ಗ, ಮೇ 1: ಭೀಕರ ಸ್ವರೂಪದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯ 7 ತಾಲೂಕುಗಳ 44 ಗ್ರಾಮಗಳಲ್ಲಿ 44 ಮಂದಿ ಹಿರಿಯ ಅಧಿಕಾರಿಗಳು ಗ್ರಾಮಗಳ ಸರಕಾರಿ ಕಚೇರಿಗಳಲ್ಲಿ ಮೇ 2 ಮತ್ತು 3ರಂದು ವಾಸ್ತವ್ಯ ಹೂಡಲಿದ್ದು, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದಾರೆಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.

ರವಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರಕಾರಿ ಕಚೇರಿಗಳಲ್ಲೇ ಅಧಿಕಾರಿಗಳು ವಾಸ್ತವ್ಯ ಹೂಡಬೇಕು. ಸಸ್ಯಹಾರ ಊಟವನ್ನೇ ಸೇವಿಸಬೇಕು. ಗ್ರಾಮದಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹೆಚ್ಚಿನ ಮಳೆ ಬೀಳುವ ಮಲೆನಾಡಿನಲ್ಲೇ ಅಂತರ್ಜಲ ತೀವ್ರ ಸ್ವರೂಪದಲ್ಲಿ ಕುಸಿದಿದ್ದು, ಜಿಲ್ಲೆಯ 2,106 ಬಾವಿಗಳಲ್ಲಿ ಅಂತರ್ಜಲ ಕುಸಿದಿದೆ. ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆಯಿರುವ ಗ್ರಾಮಗಳಲ್ಲಿ 44 ಮಂದಿ ಅಧಿಕಾರಿಗಳು ವಾಸ್ತವ್ಯ ಹೂಡಲಿದ್ದಾರೆ ಎಂದರು.

ಕುಡಿಯುವ ನೀರಿನ ಒಟ್ಟು 785 ಕಾಮಗಾರಿಗಳಿಗೆ 18.63 ಕೋಟಿ ರೂ. ಅಗತ್ಯವಿದ್ದು, ಈಗಾಗಲೇ ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಶ್ರಮಿಸಬೇಕೆಂದು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News