ಭಟ್ಕಳ: ಡೆಕ್ಕನ್ ವೆಲ್ಫೇರ್ ಅಸೋಶಿಯೇಶನ್‌ನಿಂದ ಉಚಿತ ಹೊಲಿಗೆ ಯಂತ್ರ ವಿತರಣೆ

Update: 2016-05-01 16:05 GMT

ಭಟ್ಕಳ, ಮೇ 1: ಇಲ್ಲಿನ ಡೆಕ್ಕನ್ ವೆಲ್ಫೇರ್ ಅಸೋಶಿಯೇಶನ್‌ನ ವತಿಯಿಂದ ಕಾರ್ಮಿಕ ದಿನಾಚರಣೆಯ ಅಂಗವಾಗಿ 10 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನ್ನು ವಿತರಿಸಲಾಯಿತು.

 ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಹೊಲಿಗೆ ಯಂತ್ರಗಳನ್ನು ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಜನತೆಗೆ ಜೀವನಾಧಾರವಾದ ಹೊಲಿಗೆ ಯಂತ್ರವನ್ನು ವಿತರಿಸುತ್ತಿರುವುದು ಸಂತಸ ತಂದಿದೆ. ಪ್ರತಿಯೋರ್ವರಿಗೂ ಬಡತನವನ್ನು ನಿವಾರಿಸಿಕೊಳ್ಳಲು ಒಂದು ಅವಕಾಶವಿರುತ್ತದೆ. ಅದನ್ನು ಬಳಸಿಕೊಂಡು ಜೀವನದಲ್ಲಿ ಆರ್ಥಿಕವಾಗಿ ಮುಂದೆ ಬರಬೇಕು.ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸಮಾನವಾಗಿ ಕೆಲಸ ಮಾಡಿಕೊಂಡಿದ್ದರೂ ಕೂಡಾ ಹಲವರು ಬಡತನದಲ್ಲಿಯೇ ಇದ್ದಾರೆ. ಅಂತಹ ಬಡಜನತೆಯ ಸಹಕಾರಕ್ಕೆ ಬಂದಿರುವ ಡೆಕ್ಕನ್ ವೆಲ್ಫೇರ್ ಅಸೋಶಿಯೇಶನ್‌ನ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

 ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಾ.ಸೈಯದ್ ಜಮೀರುಲ್ಲಾ ಶರೀಫ್, ತಮ್ಮ ಅಸೋಶಿಯೇಶನ್ ಶಿಕ್ಷಣ, ಆರೋಗ್ಯ, ಬಡ ಜನತೆಗೆ ಆರ್ಥಿಕ ನೆರವು ನೀಡುತ್ತಾ ಬಂದಿದೆ. ಕಳೆದ 16 ವರ್ಷಗಳಲ್ಲಿ ಅನೇಕ ವೈದ್ಯಕೀಯ ಕ್ಯಾಂಪ್, ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಶಿಬಿರಗಳು, ವಿದ್ಯಾರ್ಥಿವೇತನ ಇತ್ಯಾದಿಗಳನ್ನು ನೀಡುತ್ತಾ ಬಂದಿದ್ದೇವೆ. ಇಲ್ಲಿ ಯಾವುದೇ ಜಾತಿ, ಧರ್ಮ ಎನ್ನುವ ಬೇಧ ಮಾಡದೇ ಸಮಾಜದಲ್ಲಿ ಅಗತ್ಯವಿರುವ ಎಲ್ಲರಿಗೂ ಸಹಾಯ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು. ಯಾವುದೇಕಾರಣಕ್ಕೂ ಹೊಲಿಗೆ ಯಂತ್ರಗಳನ್ನು ಪರಬಾರೆ ಮಾಡದೇ ಇದರಿಂದ ದುಡಿಮೆ ಮಾಡಿ ಆರ್ಥಿಕವಾಗಿ ಸಬಲರಾಗಿ ಎಂದು ಮಹಿಳೆಯರಿಗೆ ಕರೆ ನೀಡಿದರು.

ಈ ಸಂದರ್ಭ ಅಸೋಶಿಯೇಶನ್‌ನ ಅಧ್ಯಕ ಡಾ.ಸೈಯದ್ ಜಮೀರುಲ್ಲಾ ಶರೀಫ್ ಮತ್ತು ಜರೀನಾ ದಂಪತಿ ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರರನ್ನು ಸನ್ಮಾನಿಸಿದರು.

ಹೊಲಿಗೆ ಯಂತ್ರಗಳನ್ನು ಲೀಲಾವತಿ ಗೊಂಡ, ಮೆಹರ್ ಬಾನು, ಖಾತೂನಬಿ, ಐಶಾ, ತಬಸ್ಸುಮ್, ಸಬಾ ಪರ್ವೀನ್, ಶಬನಮ್, ಲತೀಫಾ, ಅಶ್ವಿನಿ ನಾಯ್ಕ, ಛಾಯಾ ನಾಯ್ಕರಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವೌಲಾನಾ ಶುಜಾನದ್ವಿ ಮಾತನಾಡಿದರು.ಅಬ್ದುರ್ರಹ್ಮಾನ್ ಕುರಾನ್ ಪಠಣ ಮಾಡಿದರು. ಸಂಸ್ಥೆಯ ಕಾರ್ಯದರ್ಶಿ ಅಮ್ಜದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಡಾ.ನಸೀಮ್ ಖಾನ್ ಅತಿಥಿಗಳನ್ನು ಪರಿಚಯಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News