ಮುಂಡಳ್ಳಿ ಸತ್ಯನಾರಾಯಣ ದೇವಸ್ಥಾನದಲ್ಲಿ ಮೂರ್ತಿಗಳ ಪುನರ್ ಪ್ರತಿಷ್ಠೆ

Update: 2016-05-01 16:54 GMT

ಭಟ್ಕಳ, ಮೇ 1: ಇಲ್ಲಿನ ಮುಂಡಳ್ಳಿಯ ಪುರಾತನ ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಹಾಗೂ ಶ್ರೀ ಮಹಾಗಣಪತಿ ದೇವರ ಪುನರ್ ಪ್ರತಿಷ್ಠೆ, ಶಿಖರ ಕಲಶ ಪ್ರತಿಷ್ಠೆ, ಅಷ್ಟಬಂಧ ಲೇಪನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ವೇ.ಮೂ. ರಮಾನಂದ ಅವಭೃತರ ನೇತೃತ್ವದಲ್ಲಿ ನಡೆಯಿತು.

ಬೆಳಗ್ಗಿನಿಂದಲೇ ಗಣೇಶ ಪೂಜೆ, ಪುಣ್ಯಾಹ ಶುದ್ಧಿ, ನವಗ್ರಹ ಹೋಮ, ರತ್ನನ್ಯಾಸ, ಪೀಠ ಪ್ರತಿಷ್ಠಾ ಕಾರ್ಯಕ್ರಮಗಳು ಜರಗಿದವು.

ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ದೇವಸ್ಥಾನಗಳು ಮುಂದಿನ ಜೀವನಕ್ಕೆ ದಾರಿತೋರುವ ಕೇಂದ್ರಗಳಾಗಿವೆ. ಶ್ರದ್ಧಾ ಭಕ್ತಿಯಿಂದ ದೇವರನ್ನು ನೆನೆದರೆ ಖಂಡಿತವಾಗಿಯೂ ಒಳಿತನ್ನು ಪಡೆಯಬಹುದು. ದೇವಾಲಯದ ನಿರ್ಮಾಣ ಬಹುದೊಡ್ಡ ಕೊಡುಗೆಯಾಗಿದ್ದು, ಈ ಭಾಗ್ಯ ಕೆಲವೇ ಕೆಲವು ಮಂದಿಗೆ ಮಾತ್ರ ದೊರೆಯುತ್ತದೆ. ಮುಂಡಳ್ಳಿಯ ಈ ಭವ್ಯವಾದ ಮಂದಿರ ನಿರ್ಮಾಣದ ಮುಂದಾಳತ್ವ ವಹಿಸಿದ ದಾಮೋದರ ಗರ್ಡಿಕರ್ ಹಾಗೂ ಸಹಕರಿಸಿದ ಸದ್ಬಕ್ತರಿಗೂ ದೇವರ ಕೃಪೆಯಿರಲಿ ಎಂದು ಹಾರೈಸಿದರು.

ಶ್ರೀ ಸತ್ಯನಾರಾಯಣ ಸೇವಾಡಳಿತ ಮಂಡಳಿಯ ಅಧ್ಯಕ್ಷ ದಾಮೋದರ ಗರ್ಡೀಕರ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪಿ.ಎಲ್.ಡಿ. ಬ್ಯಾಂಕ್‌ನ ಅಧ್ಯಕ್ಷ ಸುನಿಲ್ ನಾಯ್ಕ, ಶ್ರೀ ರಾಮ ಕ್ಷೇತ್ರದ ಟ್ರಸ್ಟಿ ಜೆ.ಎನ್. ನಾಯ್ಕ, ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಬಿ.ನಾಯ್ಕ, ಹೊಗೆವಡ್ಡಿ ಶ್ರೀ ಆಂಜನೇಯ ದೇವಸ್ಥಾನದ ಆಡಳಿತ ಟ್ರಸ್ಟಿ ಅನಂತ ನಾಯ್ಕ, ಮಂಕಿಯ ವಾಮನ ನಾಯ್ಕ, ಸಾರದಹೊಳೆ ಜೆ.ಜೆ.ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಶಿಲ್ಪಿ ಕಾರ್ಕಳದ ವಿಶ್ವನಾಥರನ್ನು ಶ್ರೀಗಳು ಸನ್ಮಾನಿಸಿದರು.

ಶ್ರೀ ಸತ್ಯನಾರಾಯಣ ಸೇವಾ ಮಂಡಳಿಯ ಅಧ್ಯಕ್ಷ ದಾಮೋದರ ಗರ್ಡಿಕರ್ ಸ್ವಾಗತಿಸಿದರು. ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಭಾಸ್ಕರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜು ನಾಯ್ಕ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News