ನೀರಿಗಾಗಿ ಹೆಚ್ಚಿನ ಹಣ ಬಿಡುಗಡೆಗೆ ಸರಕಾರ ಸಿದ್ಧ: ಸಚಿವ ದಿನೇಶ್ ಗುಂಡೂರಾವ್
ಮೂಡಿಗೆರೆ, ಮೇ 2: ಈ ವರ್ಷದ ಪ್ರಾರಂಭದಿಂದ ಮೇ ತಿಂಗಳವರೆಗೂ ಮಳೆ ಇಲ್ಲದಿರುವುದರಿಂದ ಮೂಡಿಗೆರೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಸರಕಾರಕ್ಕೆ ಅಭ್ಯಂತರವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಅವರು ಸೋಮವಾರ ಬರ ಅಧ್ಯಯನ ತಂಡದ ಸಹಕಾರ ಸಚಿವ ಮಹದೇವ್ ಪ್ರಸಾದ್, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಕಾನೂನು ಸಚಿವ ಟಿ.ಬಿ.ಜಯಚಂದ್ರ ಸಹಿತ ನಾಲ್ವರು ಸಚಿವರು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಾಗುವ ಬೀಜುವಳ್ಳಿಯ ಸುಂಡೇಕೆರೆ ಹಳ್ಳವನ್ನು ವೀಕ್ಷಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.
ಕುಡಿಯುವ ನೀರಿಗಾಗಿ ಸ್ಪೆಷಲ್ ಟಾಸ್ಕ್‌ಫೋರ್ಸ್ ಮೂಲಕ ಈವರೆಗೆ ಸಾಕಷ್ಟು ಹಣ ವಿನಿಯೋಗಿಸಲಾಗಿದೆ. ಈಗಲೂ 50 ಲಕ್ಷ ರೂ. ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ. ಅಗತ್ಯ ಕಂಡುಬಂದಲ್ಲಿ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡಲು ಸರಕಾರ ಸಿದ್ಧವಿದೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಸರಕಾರ ವಿಶೇಷ ಕಾಳಜಿ ವಹಿಸಿದೆ ಎಂದರು.
ಆಗಾಗ ಕೈಕೊಡುವ ವಿದ್ಯುತ್ ಸಮಸ್ಯೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯವಿರುವಷ್ಟು ವಿದ್ಯುತ್ ಒದಗಿಸಲು ಬದ್ಧ ಎಂದು ತಿಳಿಸಿದರು. ಬರದಿಂದಾಗಿ ರೈತರ ಸಾಲ ಮರುಪಾವತಿಗೆ ರೈತರು ತೊಂದರೆ ಅನುಭವಿಸುತ್ತಿರುವುದರಿಂದ ಮುಂದಿನ 1 ವರ್ಷದವರೆಗೆ ಸಾಲ ಮರುಪಾವತಿಯಿಂದ ವಿನಾಯಿತಿ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಸರಕಾರದ ಎಲ್ಲ ಸಚಿವರೂ ರಾಜ್ಯದಲ್ಲಿ ಬರ ಅಧ್ಯಯನ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಬರದಿಂದ ತತ್ತರಿಸುವ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡು ಹಿಡಿಯಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಕುಡಿಯುವ ನೀರು ಹಾಗೂ ವಿದ್ಯುತ್‌ಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸರಕಾರದ ಬೊಕ್ಕಸ ಖಾಲಿಯಾಗಿಲ್ಲ. ಬರ ನಿರ್ವಹಣೆಗೆ ಸರಕಾರದ ಬೊಕ್ಕಸದಲ್ಲಿ ಸಾಕಷ್ಟು ಹಣವಿದೆ ಎಂದು ಹೇಳಿದರು. ನಂತರ ತರಾತುರಿಯಲ್ಲಿ ಚಿಕ್ಕಮಗಳೂರಿನ ಮೂಗ್ತಿಹಳ್ಳಿಗೆ ತೆರಳಿದರು. ಉದಾ್ಘಟನೆ: ಬರ ಅಧ್ಯಯನಕ್ಕೆಂದು ಬಂದ ನಾಲ್ವರು ಸಚಿವರು ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಡೆಯುತ್ತಿದ್ದ ಚೈತನ್ಯ ಪರಿಶಿಷ್ಟ ಜಾತಿ ಮಹಿಳಾ ಪತ್ತಿನ ಸಹಕಾರ ಸಂಘ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದರು.
ಬರಗಾಲ ವೀಕ್ಷಣೆಗೆ ಬಂದಿದ್ದ ಸಚಿವರು ಮೈಸೂರು ಪೇಟದೊಂದಿಗೆ ಹಾರ, ತುರಾಯಿ ಸ್ವೀಕರಿಸಿದ್ದು ವಿಶೇಷವಾಗಿತ್ತು.