ಶಿವಮೊಗ್ಗ ರಾಜಕಾಲುವೆಗಳ ದುರಸಿ್ತ ಕಾರ್ಯಕೆ್ಕ ಚಾಲನೆ
<ಬಿ. ರೇಣುಕೇಶ್
ಶಿವಮೊಗ್ಗ, ಮೇ 2: ಕಸಕಡ್ಡಿ, ಹೂಳು ತುಂಬಿಕೊಂಡು ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದ್ದ ಹಾಗೂ ಮಳೆಗಾಲದಲ್ಲಿ ಸರಾಗವಾಗಿ ಮಳೆ ನೀರು ಹರಿದು ಹೋಗಲು ಸಾಧ್ಯವಾಗದಂತಹ ದುಃಸ್ಥಿತಿಯಲ್ಲಿದ್ದ ನಗರ ವ್ಯಾಪ್ತಿಯಲ್ಲಿರುವ ರಾಜಕಾಲುವೆಗಳ ದುರಸ್ತಿಗೆ ಕೊನೆಗೂ ಮಹಾನಗರ ಪಾಲಿಕೆ ಆಡಳಿತ ಮುಂದಾಗಿದೆ. ಪಾಲಿಕೆಯ ಈ ಕ್ರಮದಿಂದ ರಾಜಕಾಲುವೆ ಇಕ್ಕೆಲ ಹಾಗೂ ತಗ್ಗು ಪ್ರದೇಶದ ಬಡಾವಣೆಗಳ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ. ಹೌದು. ರಾಜಕಾಲುವೆಗಳ ಸಮಗ್ರ ದುರಸ್ತಿ ಹಾಗೂ ನಿರ್ವಹಣೆಗೆ ಪಾಲಿಕೆ ಆಡಳಿತ ಸದ್ದುಗದ್ದಲವಿಲ್ಲದೆ ಬೃಹತ್ ಸ್ವಚ್ಛತಾ ಅಭಿಯಾನವೊಂದನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಮೇ 2 ರಿಂದ 14 ರವರೆಗೆ ಈ ಅಭಿಯಾನ ನಡೆಯಲಿದೆ. ಇದಕ್ಕೆ ವಾರ್ಡ್‌ವಾರು ಪ್ರತ್ಯೇಕ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಸುಮಾರು 80 ಕಾರ್ಮಿಕರನ್ನು ಬಳಕೆ ಮಾಡಲಾಗುತ್ತಿದೆ. ಸೋಮವಾರ ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಐಡಿಯಲ್ ಗೋಪಿ ಸುದ್ದಿಗಾರ ರೊಂದಿಗೆ ಮಾತನಾಡಿ, ಮಳೆಗಾಲ ಆರಂಭಕ್ಕೆ ಇನ್ನೂ ಒಂದು ತಿಂಗಳಿದೆ. ಅಷ್ಟರಲ್ಲಿ ನಗರ ವ್ಯಾಪ್ತಿಯಲ್ಲಿರುವ ರಾಜಕಾಲುವೆ ಹಾಗೂ ಪ್ರಮುಖ ಚರಂಡಿಗಳನ್ನು ಕಸಕಡ್ಡಿಗಳಿಂದ ಸ್ವಚ್ಛಗೊಳಿಸುವುದರ ಜೊತೆಗೆ ದುರಸ್ತಿ ಕಾರ್ಯ ಕೈಗೊಳ್ಳುವ ಭಾರೀ ಸ್ವಚ್ಛತಾ ಅಭಿಯಾನವನ್ನು ಪಾಲಿಕೆ ಆಡಳಿತ ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಮೇಯರ್ ಎಸ್.ಕೆ.ಮರಿಯಪ್ಪ ಹಾಗೂ ಆಯುಕ್ತೆ ತುಷಾರಮಣಿಯವರು ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಿದ್ದಾರೆ. ಮಳೆಗಾಲ ಆರಂಭವಾಗುವುದರೊಳಗೆ ರಾಜಕಾಲುವೆ, ಮಳೆ ನೀರು ಹರಿದು ಹೋಗುವ ಪ್ರಮುಖ ಚರಂಡಿ ಹಾಗೂ ತಗ್ಗು ಪ್ರದೇಶ ಗಳ ಸಮಗ್ರ ನಿರ್ವಹಣೆಗೆ ಮುಂದಾಗಿದ್ದಾರೆ. ಇದು ನಿಜಕ್ಕೂ ಸ್ವಾಗತಾರ್ಹ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ. ಇಂದಿನಿಂದ ಆರಂಭವಾಗಿರುವ ಈ ಸ್ವಚ್ಛತಾ ಅಭಿಯಾನವು ಮೇ 14ರವರೆಗೆ ನಿರಂತರವಾಗಿ ನಡೆಯಲಿದೆ. ವಾರ್ಡ್‌ವಾರು ಅಧಿಕಾರಿಗಳ ನೇತೃತ್ವ ದಲ್ಲಿ ಮೇಲುಸ್ತುವಾರಿ ತಂಡ ರಚನೆ ಮಾಡ ಲಾಗಿದೆ. ಕಾಲಮಿತಿಯೊಳಗೆ ಈ ತಂಡಗಳು ತಮ್ಮ ವ್ಯಾಪ್ತಿಯ ಲ್ಲಿರುವ ರಾಜಕಾಲುವೆಗಳ ದುರಸ್ತಿಗೆ ಅಗತ್ಯ ಕ್ರಮಕೈಗೊ ಳ್ಳಲಿವೆ ಎಂದು ಐಡಿಯಲ್ ಗೋಪಿ ಮಾಹಿತಿ ನೀಡಿದ್ದಾರೆ. ಜಲಾವೃತ ಸಾಮಾನ್ಯ: ಮಳೆಗಾಲದ ವೇಳೆ ನಗರದ ಹಲವೆಡೆ ರಸ್ತೆ ಹಾಗೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು, ಮನೆಗಳು ಜಲಾವೃತವಾಗುವುದು ಸರ್ವೇಸಾಮಾನ್ಯ. ಇದಕ್ಕೆ ರಾಜಕಾಲುವೆ, ಪ್ರಮುಖ ಚರಂಡಿಗಳ ಅವ್ಯವಸ್ಥೆಯೇ ಕಾರಣವಾಗಿತ್ತು. ಕಾಲುವೆಗಳಲ್ಲಿ ತುಂಬಿಕೊಂಡಿರುತ್ತಿದ್ದ ಕಸಕಡ್ಡಿ, ಹೂಳು, ಸಣ್ಣಪುಟ್ಟ ದುರಸ್ತಿಯ ಕಾರಣದಿಂದ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ತಗ್ಗು ಪ್ರದೇಶಗಳಿಗೆ ನುಗ್ಗುತ್ತಿತ್ತು. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ, ಪೂರ್ವಭಾವಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದರ ನೇರ ಪರಿಣಾಮ ರಾಜಕಾಲುವೆ ಹಾಗೂ ತಗ್ಗುಪ್ರದೇಶಗಳ ನಿವಾಸಿಗಳ ಮೇಲೆ ಬೀರುತ್ತಿತ್ತು. ತಮ್ಮದಲ್ಲದ ತಪ್ಪಿಗೆ ನಿವಾಸಿಗಳು ತೊಂದರೆ ಎದುರಿಸಬೇಕಾಗಿತ್ತು. ಕೆಲ ಬಡಾವಣೆಗಳ ನಿವಾಸಿಗಳಂತೂ ಮಳೆಗಾಲ ಆರಂಭವಾಗುತ್ತಿದ್ದಂತೆ ಯಾವಾಗ ತಮ್ಮ ಮನೆಗಳಿಗೆ ನೀರು ನುಗ್ಗುವುದೋ ಎಂಬ ಆತಂಕದಲ್ಲಿಯೇ ದಿನದೂಡುವಂತಾಗಿತ್ತು.
ಮೇಯರ್, ಆಯುಕ್ತರ ವಿಶೇಷ ಆಸಕ್ತಿ: ರಾಜಕಾಲುವೆ ಹಾಗೂ ಚರಂಡಿಯ ಅವ್ಯವಸ್ಥೆ ಯಿಂದ ಮಳೆಗಾಲದ ವೇಳೆ ತಗ್ಗುಪ್ರದೇಶಗಳು ಜಲಾವೃತವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಮೇಯರ್ ಎಸ್.ಕೆ.ಮರಿಯಪ್ಪ, ಆಯುಕ್ತೆ ತುಷಾರಮಣಿಯವರು ವಿಶೇಷ ಆಸಕ್ತಿವಹಿಸಿ ರಾಜಕಾಲುವೆ ಹಾಗೂ ಮಳೆ ನೀರು ಹರಿದು ಹೋಗುವ ಪ್ರಮುಖ ಚರಂಡಿ ಮತ್ತು ತಗ್ಗು ಪ್ರದೇಶಗಳನ್ನು ಮೇಲ್ದರ್ಜೆಗೇರಿಸಲು ಕ್ರಮಕೈಗೊಂಡಿದ್ದಾರೆ.
<ಐಡಿಯಲ್ ಗೋಪಿ, ಮನಪಾ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ