ಸಂಪಾಜೆಯಲ್ಲಿ ಭೀಕರ ರಸ್ತೆ ಅಪಘಾತ
ಮಡಿಕೇರಿ, ಮೇ 2: ಓಮ್ನಿಗೆ ಕಂಟೈನರ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಕೊಡಗಿನ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಸಂಪಾಜೆ ಸಮೀಪದ ಗೂನಡ್ಕ ಗ್ರಾಮದಲ್ಲಿ ನಡೆದಿದೆ.
ಕೊಡಗಿನ ಕಡಂಗ ಗ್ರಾಮದ ಯೂಸುಫ್(35) ಹಾಗೂ ಮಕ್ಬೂಲ್(60) ಎಂಬವರೇ ಮೃತ ವ್ಯಕ್ತಿಗಳು. ಸೋಮವಾರ ಮುಂಜಾನೆ ಕೊಡಗಿನ ಕಡಂಗ ಗ್ರಾಮದ ಮಕ್ಬೂಲ್, ಪತ್ನಿ ಝುಲೈಕ ಹಾಗೂ ಪುತ್ರ ಸಲೀಂ ಮಂಗಳೂರಿಗೆ ಓಮ್ನಿಯಲ್ಲಿ ತೆರಳುತ್ತಿದ್ದ ಸಂದರ್ಭ ಗೂನಡ್ಕದ ಬೀಜ ಕೊಚ್ಚಿ ಎಂಬಲ್ಲಿ ಮಂಗಳೂರಿನ ಕಡೆಯಿಂದ ಬರುತ್ತಿದ್ದ ಕಂಟೈನರ್ ಢಿಕ್ಕಿ ಯಾಗಿದೆ. ಅಪಘಾತದಲ್ಲಿ ಚಾಲಕ ಯೂಸುಫ್ ಹಾಗೂ ಎದುರು ಭಾಗದಲ್ಲಿ ಕುಳಿತಿದ್ದ ಮಕ್ಬೂಲ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಸೀಟಿನಲ್ಲಿದ್ದ ಝುಲೈಕ ಮತ್ತು ಪುತ್ರ ಸಲೀಂ ಸ್ಥಿತಿ ಚಿಂತಾಜನಕವಾಗಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.