ಬಿಳವಾಣಿ ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಒ ಕ್ರಮಕ್ಕೆ ವಿರೋಧ
ಸೊರಬ, ಮೇ 2: ಕುಡಿಯುವ ನೀರಿನ ವಿಚಾರದಲ್ಲಿ ಜಾತಿ, ಪಕ್ಷ ರಾಜಕಾರಣ ಮಾಡುತ್ತಿರುವುದು ಖಂಡನೀಯ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಗುಡುಗಿದರು. ಸೋಮವಾರ ಪಟ್ಟಣದ ತಾಲೂಕು ಕಚೇರಿ ಎದುರು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ತಾರತಮ್ಯ ಎಸಗುತ್ತಿರುವ ಬಿಳವಾಣಿ ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಒ ಕ್ರಮವನ್ನು ವಿರೋಧಿಸಿ ತಾಲೂಕು ಬಿಜೆಪಿ ಘಟಕ ಹಾಗೂ ಗೇರುಕೊಪ್ಪ ಗ್ರಾಮಸ್ಥರ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ತಾಲೂಕನ್ನು ಸರಕಾರ ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದು, ಇತರ ತಾಲೂಕುಗಳಿಗೆ ಸರಕಾರ ಟಾಸ್ಕ್ ಫೋರ್ಸ್‌ನಲ್ಲಿ 50 ಲಕ್ಷ ರೂ. ನೀಡಿದ್ದರೇ, ಸೊರಬಕ್ಕೆ ವಿಶೇಷವಾಗಿ ಒಂದೂವರೆ ಕೋಟಿ ರೂ. ಅನುದಾನವನ್ನು ನೀಡಿದೆ. ಆದರೆ, ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೇ, ಜನಪ್ರತಿನಿಧಿಗಳ ಜೊತೆ ಶಾಮೀಲಾಗಿ ಕುಡಿಯುವ ನೀರಿನ ವೈವಸ್ಥೆ ಕಲ್ಪಿಸುವಲ್ಲಿಯೂ ತಾರತಮ್ಯ ಎಸಗುತ್ತಿರುವುದು ಖಂಡನೀಯ ಎಂದರು.
ಗ್ರಾಪಂ ಮಾಜಿ ಸದಸ್ಯ ಕೆ.ಬಿ. ಗುರುವಪ್ಪ ಮಾತನಾಡಿ, ಗೇರುಕೊಪ್ಪ ಹಾಗೂ ಬಪ್ಪಗೊಂಡನಕೊಪ್ಪದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಕೊಳವೆ ಬಾವಿ ಕೊರೆಯಲು ಬಂದಿದ್ದ ವಾಹನವನ್ನು ವಾಪಸು ಕಳಿಸುವ ಮೂಲಕ ಕುಡಿಯುವ ನೀರಿನ ಪೂರೈಕೆಯ ವಿಷಯದಲ್ಲಿಯೂ ಜಾತಿ ಹಾಗೂ ಪಕ್ಷ ರಾಜಕಾರಣ ಮಾಡಿದ್ದಲ್ಲದೇ, ಗ್ರಾಪಂ ಅಧ್ಯಕ್ಷ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ತಾರತಮ್ಯ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಜಿಪಂ ಎಇಇ ನಂಜುಂಡ ಸ್ವಾಮಿ ಮಾತನಾಡಿ, ಗ್ರಾಮದಲ್ಲಿ ಭೂ ಜಲ ತಜ್ಞ (ಜಿಯಾಲಜಿಸ್ಟ್)ರಿಂದ ಕೊಳವೆ ಬಾವಿ ಕೊರೆಸಲು ಸ್ಥಳ ಗುರುತಿಸಿಲ್ಲ. ಜಿಲ್ಲೆಗೆ ಒಬ್ಬರೇ ಜಲ ತಜ್ಞ ಇರುವುದರಿಂದ ವಿಳಂಬವಾಗುತ್ತಿದೆ. ಕೂಡಲೇ ಅವರನ್ನು ಸಂಪರ್ಕಿಸಿ ಇನ್ನೆರಡು ದಿನಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕಾವಲಿ ನಾಗರಾಜ ಗೌಡ, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಪ್ರಮುಖರಾದ ಡಿ. ಶಿವಯೋಗಿ, ನಿರಂಜನ್ ದೇವತಿಕೊಪ್ಪ, ಚಂದ್ರಪ್ಪ ಬರಗಿ, ಬಾಸೂರು ಅಶೋಕ್, ಅರುಣ್ ಸೀಗೆಹಳ್ಳಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.