×
Ad

ಮಹಿಳೆಯರು ಆರ್ಥಿಕವಾಗಿ ಸಬಲರಾಗಿ: ಚಾರುಲತಾ

Update: 2016-05-02 22:22 IST

ಮಡಿಕೇರಿ, ಮೇ 2: ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಪ್ರದೇಶದ ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರು, ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಸಂಘಟನೆಯಾಗಿ ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಗಮನಹರಿಸಬೇಕಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸಂಜೀವಿನಿ ಯೋಜನೆಯಡಿ ಮಹಿಳಾ ಸ್ವ ಸಹಾಯ ಸಂಘಗಳ ಸಭೆಯಲ್ಲಿ ಇದೇ ಪ್ರಥಮ ಬಾರಿಗೆ ಜಿಲ್ಲೆಯ ಆಯ್ದ ಮಹಿಳಾ ಸ್ವ ಸಹಾಯ ಗುಂಪುಗಳನ್ನು ಆಹ್ವಾನಿಸಿ ಸಂಜೀವಿನಿ ಯೋಜನೆ ಸದುಪಯೋಗ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು. ಮಹಿಳಾ ಸ್ವ ಸಹಾಯ ಗುಂಪುಗಳಿಗೆ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ (ಸಂಜೀವಿನಿ ಯೋಜನೆ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ ರಾಜ್ ಇಲಾಖೆಯ ಮೂಲಕ ಅನುಷ್ಠಾನವಾಗುತ್ತಿರುವ ಯೋಜನೆಗಳು ತಲುಪಬೇಕು.

ಸಂಜೀವಿನಿ ಯೋಜನೆ ಜೊತೆಗೆ ನರೇಗಾ ಯೋಜನೆಯಡಿ ಪ್ರತಿಯೊಬ್ಬರೂ ಜಾಬ್ ಕಾರ್ಡ್ ಪಡೆಯುವುದು ಹಾಗೂ ಸ್ವಚ್ಛ ಭಾರತ ಅಭಿಯಾನದಡಿ ಪ್ರತಿ ಕುಟುಂಬವೂ ಶೌಚಾಲಯ ಹೊಂದುವುದು ಮತ್ತಿತರ ವಿಚಾರಗಳ ಕುರಿತು ಮಾರ್ಗದರ್ಶನ ನೀಡಿದರು. ಗ್ರಾಮೀಣ ಪ್ರದೇಶದ ಜನರ ಆದಾಯವನ್ನು ಹೆಚ್ಚಿಸುವುದರ ಜೊತೆಗೆ ಬಡತನವನ್ನು ಕಡಿಮೆಗೊಳಿಸಲು ಸ್ವ ಸಹಾಯ ಗುಂಪುಗಳಿಗೆ ಸರಕಾರದಿಂದ ಹಲವು ಸೌಲಭ್ಯಗಳಿದ್ದು, ಅವುಗಳನ್ನು ಪಡೆದುಕೊಳ್ಳುವಂತೆ ಸಿಇಒ ಹೇಳಿದರು. ಸ್ವ-ಸಹಾಯ ಗುಂಪುಗಳನ್ನು ಜೊತೆಗೂಡಿಸಿ ಸಂಸ್ಥೆಗಳ ನಿರ್ಮಾಣ ಮಾಡುವುದು, ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕ್ ಸಂಪರ್ಕ, ಆರ್ಥಿಕ ಸಾಕ್ಷರತೆ ಹೆಚ್ಚಿಸುವುದು, ಜೀವನೋಪಾಯ ಉತ್ತೇಜನ, ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳನ್ನು ಆಧರಿಸಿ ಉತ್ಪನ್ನ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವುದು, ಸ್ವ-ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿಯೊಂದಿಗೆ ಉದ್ಯೋಗ ಅಭಿವೃದ್ಧಿ ಮತ್ತು ಉದ್ಯೋಗ ಸಂಬಂಧಿ ಕೆಲಸಗಳಿಗೆ ಉತ್ತೇಜನ ನೀಡುವುದು ಮತ್ತಿತರ ಸಂಬಂಧ ಜಾಗೃತಿ ಅಗತ್ಯ ಎಂದು ಚಾರುಲತಾ ಸೋಮಲ್ ಸಲಹೆ ನೀಡಿದರು.

ಜಿಪಂ ಯೋಜನಾ ನಿರ್ದೇಶಕ ಶ್ರೀಕಂಠಮೂರ್ತಿ ಮಾತನಾಡಿ, ಸರಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ 21 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಜಿಪಂ ಉಪಕಾರ್ಯದರ್ಶಿ ವಿಶ್ವನಾಥ ಪೂಜಾರಿ ಮಾತನಾಡಿ ಮುಖ್ಯಮಂತ್ರಿಯವರ 21 ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿದಲ್ಲಿ ಗ್ರಾಮೀಣಾಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಸ್ವ-ಸಹಾಯ ಗುಂಪುಗಳು ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಸಂಜೀವಿನಿ ಯೋಜನೆಯ ಸಂಯೋಜಕ ಪದ್ಮಶ್ರೀ, ಮಹಿಳಾ ಸ್ವಸಹಾಯ ಗುಂಪುಗಳಿಗಿರುವ ಸಾಲ ಸೌಲಭ್ಯ, ಸಹಾಯಧನ, ಸುತ್ತು ನಿಧಿ ಸೌಲಭ್ಯ ಮತ್ತಿತರ ಬಗ್ಗೆ ಹಲವು ಮಾಹಿತಿ ನೀಡಿದರು. ಜಿಪಂ ಯೋಜನಾ ಶಾಖೆಯ ವಸಂತ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News