×
Ad

ಫಲಾಪೇಕ್ಷೆ ಇಲ್ಲದೆ ಉಚಿತ ಸಿಇಟಿ ತರಬೇತಿ: ದತ್ತ

Update: 2016-05-02 22:24 IST

ಕಡೂರು, ಮೇ 2: ಗ್ರಾಮೀಣ ಭಾಗದ ಜನರ ಕಷ್ಟದ ಬಗ್ಗೆ ನನಗೆ ಅನುಭವ ಇರುವುದರಿಂದ ಮಕ್ಕಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಉಚಿತ ಸಿಇಟಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದ್ದಾರೆ.

ಅವರು ಸರಕಾರಿ ಪಿಯು ಕಾಲೇಜಿನ ಆವರಣದಲ್ಲಿ ನಡೆದ ಕಡೂರು-ಬೀರೂರು ಸರಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಸುಮಾರು 22 ದಿನಗಳ ಕಾಲ ಹಮ್ಮಿಕೊಂಡಿದ್ದ ಉಚಿತ ಸಿಇಟಿ ಕೋರ್ಸ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಒಳ್ಳೆಯ ಕೆಲಸಗಳನ್ನು ಮಾಡಿದರೆ ಸಹಿಸಿಕೊಳ್ಳದ ಜನ ಸಮಾಜದಲ್ಲಿದ್ದಾರೆ. ನನ್ನ ಸ್ವಂತ ಹಣ ಸುಮಾರು 6.00 ಲಕ್ಷ ರೂ. ವ್ಯಯ ಮಾಡಿ ಗ್ರಾಮೀಣ ಭಾಗದ ಬಡ ಮಕ್ಕಳಿಗಾಗಿ ಸಿಇಟಿ ಕೋರ್ಸ್ ಮಾಡಿಸಿದರೆ ಸಹಿಸಿಕೊಳ್ಳದ ಕೆಲವರು ಟೀಕೆ ಮಾಡಿದ್ದಾರೆ ಎಂದರು.

ಕಳೆದ ವರ್ಷ ಸಿಇಟಿಯ ಬಗ್ಗೆ ಬಹಳಷ್ಟು ಟೀಕೆಗಳು ಬಂದರೂ ಯಾವುದಕ್ಕೂ ಜಗ್ಗದೆ 2ನೆ ವರ್ಷವು ಸಹ ಸಿಇಟಿ ತರಬೇತಿ ನಡೆಸಲಾಗಿದೆ. 3 ಮಕ್ಕಳಾದರು ಒಳ್ಳೆಯ ರ್ಯಾಂಕ್ ಪಡೆದರೆ ಅದೇ ನನಗೆ ತೃಪ್ತಿ ನೀಡಲಿದೆ ಎಂದು ಹೇಳಿದರು.

ಕಡೂರು ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಇದನ್ನು ನೋಡಿ ಮನನೊಂದು ಸದನದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದಾಗ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ರವರು ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ಸಭೆಯನ್ನು ಕಡೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷ ಸಭೆ ಕರೆಯುವ ಭರವಸೆ ನೀಡಿದರು. ಅದರ ಪ್ರಕಾರ ವಿಧಾನಸೌಧದಲ್ಲಿ ಸಭೆ ಕರೆದಿದ್ದು, ಇತಿಹಾಸದಲ್ಲಿ ಇದು ಪ್ರಥಮ. ವಿದ್ಯುತ್ ಸಮಸ್ಯೆ ಪರಿಹರಿಸಲು ಸುಮಾರು 150 ಕೋಟಿ ರೂ. ಮಂಜೂರಾತಿ ನೀಡಲಾಗಿದೆ ಎಂದರು.

ಉಪವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಕುಂಕಾನಾಡು, ಅಂತರಘಟ್ಟೆ, ಬುಕ್ಕಸಾಗರ ಇವುಗಳಿಗೆ ತಲಾ 9 ಕೋಟಿ ರೂ.ಗಳಂತೆ 27 ಕೋಟಿ ರೂ. ಮಂಜೂರಾತಿ ದೊರೆತ್ತಿದ್ದು, ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಜಯಪ್ಪ ವಹಿಸಿದ್ದರು, ನಿವೃತ್ತ ಪ್ರಾಂಶುಪಾಲ ಪುಟ್ಟಕರಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೀರೂರು ಕಾಲೇಜು ಪ್ರಾಂಶುಪಾಲೆ ಯಶೋಧ, ಕೆ.ಎಂ. ಮಹೇಶ್ವರಪ್ಪ, ಭಂಡಾರಿ ಶ್ರೀನಿವಾಸ್, ಬಿದರೆ ಜಗದೀಶ್, ಲಕ್ಕಪ್ಪ, ಡಿ.ಎಸ್. ಉಮೇಶ್, ತಾಪಂ ಸದಸ್ಯ ಚಂದ್ರಪ್ಪ, ಉಪನ್ಯಾಸಕ ನಾಗರಾಜು, ಧನಂಜಯ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News