ಮೂಡಿಗೆರೆಯಲ್ಲಿ ಸರಳ ಸಾಮೂಹಿಕ ವಿವಾಹ-ಸಂಸ್ಕೃತಿ ಸಂಭ್ರಮ
ಮೂಡಿಗೆರೆ, ಮೇ 2: ಮಲೆನಾಡಿನ ಜಾನಪದ ಶೈಲಿಯ ಆಚಾರ-ವಿಚಾರ ಸಂಸ್ಕೃತಿಯ ನ್ನೊಳಗೊಂಡ ಸಾಮೂಹಿಕ ಮದುವೆ ಇದಾಗಿದ್ದು, ಗ್ರಾಮೀಣ ಭಾಗದ ಜನಪದ ಸೊಗಡನ್ನು ಈ ಮದುವೆ ಹೊಂದಿದೆ ಎಂದು ಚಿತ್ರನಟಿ ಹಾಗೂ ವಿಧಾನಪರಿಷತ್ ಸದಸ್ಯೆ ಜಯಮಾಲಾ ಹೇಳಿದರು.
ಅವರು ಅಂಬೇಡ್ಕರ್‌ರವರ 125ನೆ ಜನ್ಮ ದಿನಾಚರಣೆ ಅಂಗವಾಗಿ ಮೂಡಿಗೆರೆ ಪಟ್ಟಣದ ಅಡ್ಯಂತಾಯ ಸ್ಮಾರಕ ರಂಗಮಂದಿರದ ಆವರಣದಲ್ಲಿ ನಡೆದ ಸರಳ ಸಾಮೂಹಿಕ ವಿವಾಹ ಹಾಗೂ ಸಂಸ್ಕೃತಿ ಸಂಭ್ರಮ-2016 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಂದೇ ಚಪ್ಪರದಡಿಯಲ್ಲಿ ಒಂದೇ ಧ್ಯೇಯದೊಂದಿಗೆ 30 ವಧು ವರರು ಸತಿಪತಿಗಳಾಗಿ ನಿಮ್ಮ ಮುಂದಿನ ದಾಂಪತ್ಯ ಜೀವನದಲ್ಲಿ ಎಲ್ಲ್ಲ ರೀತಿಯ ಹೊಂದಾಣಿಕೆಯನ್ನು ಕಾಣುವ ಮೂಲಕ ಸುಖ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯೆ ಡಾ.ಮೋಟಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮದುವೆಗಾಗಿ ಸಾಲಮಾಡಿ ಆ ಸಾಲದ ಹೊರೆಯನ್ನು ಮಕ್ಕಳು ಮೊಮ್ಮಕ್ಕಳ ಕಾಲಕ್ಕೆ ತಿರೀಸಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಎದುರಾಗಿವೆ. ಇಲ್ಲಿ ಸರಳವಾಗಿ ಮದುವೆಯಾಗಿ ಮನೆಯಲ್ಲಿ ಅದ್ದೂರಿ ಆರತಕ್ಷತೆ ಮಾಡದೆ ಹಣವನ್ನು ತಮ್ಮ ಮುಂದಿನ ಭವಿಷ್ಯಕ್ಕೆ ಮತ್ತು ಮಕ್ಕಳ ಭವಿಷ್ಯಕ್ಕೆ ಉಪಯೋಗಿಸುವಂತೆ ನೂತನ ದಂಪತಿಗಳಿಗೆ ಕಿವಿಮಾತು ಹೇಳಿದರು.
ನಂತರ ಎಂಎಲ್ಸಿ ಡಾ.ಮೋಟಮ್ಮರವರು ನೂತನ ವಧು ವರರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಮಂದಿ ಗಣ್ಯರನ್ನು ಸನ್ಮಾನಿಸಿ ಗೌರವಿಸ ಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ಡಿ.ಕೆ.ಉದಯಶಂಕರ್, ಎ.ಜೆ.ಸುಬ್ರಾಯಗೌಡ, ಬಿ.ಎಸ್. ಜಯರಾಂ, ನಯನಾ ಜ್ಯೋತಿ ಜಾವರ್, ಎಂ.ಎಂ.ಲಕ್ಷ್ಮಣಗೌಡ, ಎಂ.ಪಿ.ಮನು, ಮದೀಶ್, ಪಾರ್ವತಮ್ಮ, ಷಣ್ಮುಖ, ಸಬ್ಲಿ ದೇವರಾಜ್, ಜಗದೀಶ್ ಆಚಾರ್, ಜಿಪಂ ಸದಸ್ಯ ನಿಖಿಲ್ ಚಕ್ರವರ್ತಿ, ಎಂ.ಎಸ್.ಅನಂತ್, ಲೋಕವಳ್ಳಿ ರಮೇಶ್, ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿಯ ಕಾಯದರ್ಶಿ ಹೊಸಕೆರೆ ರಮೇಶ್, ಪೂರ್ಣೇಶ್ ಮತ್ತಾವರ ಮತ್ತಿತರರು ಉಪಸ್ಥಿತರಿದ್ದರು.
ಸರಳ ಸಾಮೂಹಿಕ ವಿವಾಹದಲ್ಲಿ 30 ಜೋಡಿ ಸತಿಪತಿಗಳಾಗಿ ಗೃಹಸ್ಥಾಶ್ರಮವನ್ನು ಸ್ವೀಕರಿಸಿದರು. ವರನಿಗೆ ಬಿಳಿ ವಸ್ತ್ರ ಹಾಗೂ ವಧುವಿಗೆ ತಾಳಿ, ಎಂಎಲ್ಸಿ ಮೋಟಮ್ಮ ಅವರ ಪುತ್ರಿ ನಯನಾ ಜ್ಯೋತಿ ಜಾವರ್ ಅವರು ವಧುಗಳಿಗೆ ತಲಾ 1 ಮೂಗುತಿಯನ್ನು ಕೊಡುಗೆಯಾಗಿ ನೀಡಿದರು. ಪುರೋಹಿತರಾಗಿ ಕನ್ನಡದಲ್ಲಿ ಮಂತ್ರ ಪಠಿಸಿ ಮಂಗಳಕಾರ್ಯ ನೆರವೇರಿಸಿದ ಕೆ.ಕೆ.ರಾಮಯ್ಯ, ಬಿ.ಬಿ.ರಮೇಶ್, ಕೆ.ಎಲ್.ಸಾಗರ್, ಸುಬ್ರಹ್ಮಣ್ಯ, ತಿಮ್ಮಯ್ಯ, ಕೋಮರಾಜ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮದುವೆ ಮಂಟಪದ ಆವರಣದಲ್ಲಿ ಕೊಪ್ಪದ ಸುವರ್ಣ ಅವರ ಆಕರ್ಷಕ ಬೃಹತ್ ರಂಗೋಲಿ ನಳನಳಿಸಿತು.
ಮಲೆನಾಡಿನ ವಿವಿಧ ತಂಡಗಳಿಂದ ಸುಗ್ಗಿ ಕುಣಿತ, ಕೋಲಾಟ, ಧರ್ಮ ವಾದ್ಯಮೇಳ, ಮಲೆನಾಡಿನ ಜಾನಪದ ನೃತ್ಯಗಳು, ಸೋಭಾನೆ ಹಾಡು ಕಾರ್ಯಕ್ರಮ ಜನಮನ ಸೆಳೆಯಿತು.
ಶಾಸಕ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ವಧು ವರರಿಗೆ ಶುಭ ಹಾರೈಸಿದರು.