ಮೂಡಿಗೆರೆ ಪಪಂ ನಿರ್ಲಕ್ಷ: ಕುಡಿಯುವ ನೀರು ಪೋಲು
ಮೂಡಿಗೆರೆ, ಮೇ 2: ಒಂದೆಡೆ ಭೀಕರ ಬರಗಾಲದಿಂದ ತತ್ತರಿಸಿರುವ ಮಲೆನಾಡಿ ನಲ್ಲಿ ಕುಡಿಯುವ ನೀರಿಲ್ಲದೇ ಜನರು ಪರದಾಡುತ್ತಿದ್ದಾರೆ. ಇಲ್ಲಿನ ಪಪಂ ವ್ಯಾಪ್ತಿಯಲ್ಲಿ ಪಟ್ಟಣದ ಜನರು ಕುಡಿಯಲು ನೀರು ಸರಬ ರಾಜಾಗುವ ಪೈಪ್‌ಗಳು ಅಲ್ಲಲ್ಲಿ ತುಂಡಾಗಿ ನೀರು ಪೋಲಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ರಾತ್ರಿ ವೇಳೆ ವಿದ್ಯುತ್ ತ್ರೀಫೇಸ್ ಇರುವಾಗ ಬೀಜುವಳ್ಳಿಯ ಸುಂಡೇಕೆರೆ ಹಳ್ಳದಿಂದ ಹಾಗೂ ಕಿತ್ತಳೆಗಂಡಿ ಹೇಮಾವತಿ ನದಿ ಪಕ್ಕದ ನೀರು ಶುದ್ಧೀಕರಣ ಘಟಕದಿಂದ ಪಟ್ಟಣದ ದೊಡ್ಡಿಬೀದಿಯಲ್ಲಿರುವ ಎರಡು ಬೃಹತ್ ಟ್ಯಾಂಕ್‌ಗಳಲ್ಲಿ ನೀರು ಶೇಖರಣೆಯಾಗುತ್ತಿದೆ. ಬೆಳಗ್ಗೆ 5:30ರ ಸಮಯದಲ್ಲಿ ಈ ಟ್ಯಾಂಕ್‌ಗಳು ತುಂಬಿ ಪುನಃ ಗಂಟೆಗಟ್ಟಲೆ ನೀರು ಕೆಳಗೆ ಸೋರಿಕೆಯಾಗಿ ಬಾಕ್ಸ್ ಚರಂಡಿಯಲ್ಲಿ ಭಾರೀ ಗಾತ್ರದಲ್ಲಿ ಹರಿದು ಸುಂಡೇಕೆರೆ ಹಳ್ಳವನ್ನು ತಲುಪುತ್ತಿದೆ. ಕಳೆದ ಎರಡು ವರ್ಷಗಳಿಂದಲೂ ಈ ಮಟ್ಟದಲ್ಲಿ ನೀರು ಪೋಲಾಗುತ್ತಿರುವುದು ಕಂಡು ಬರುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸುತ್ತಾರೆ. ಮಾರ್ಕೆಟ್ ರಸ್ತೆಯ ಬದಿ ಕಳೆದ ಹತ್ತು ತಿಂಗಳ ಹಿಂದೆ ಕೋಳಿ, ಮೀನು, ಕುರಿ ಮಾಂಸದ ಅಂಗಡಿಗಳಿಗೆಂದು 37 ಲಕ್ಷ ರೂ. 12 ಕೊಠಡಿಗಳ ಮಳಿಗೆ ಕಟ್ಟಲು ಪ್ರಾರಂಭಿಸಿದ್ದ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿಯ ವೇಳೆ ಸಲಕರಣೆ ಸಾಗಿಸುವ ಸಮಯದಲ್ಲಿ ರಸ್ತೆ ಬದಿಯ ಕುಡಿಯುವ ನೀರಿನ ಪೈಪ್‌ಲೈನ್ ಟಿಪ್ಪರ್ ಚಕ್ರಕ್ಕೆ ಸಿಲುಕಿ ಜಖಂಗೊಂಡಿದ್ದು, ಕುಡಿಯುವ ನೀರೆಲ್ಲವೂ ಚರಂಡಿ ಪಾಲಾಗುವಂತಾಗಿದೆ.
ಪಟ್ಟಣದ ಜನರಿಗೆ ನೀರು ಸಿಗದಿರಲು ಪೈಪ್‌ಲೈನ್ ದುರಸ್ತಿ ಮಾಡದಿರುವುದೇ ಪ್ರಮುಖ ಕಾರಣವಾಗಿದೆ ಎನ್ನುವುದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪಪಂ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟದ ದಾರಿ ಹಿಡಿಯುವುದು ಅನಿವಾರ್ಯವಾಗಲಿದೆ ಎನ್ನುವುದು ನಾಗರಿಕರ ಎಚ್ಚರಿಕೆ ಧ್ವನಿಯಾಗಿದೆ.