ಮುಂಡಗೋಡ: ಜ್ವರದಿಂದ ಆಸ್ಪತ್ರೆ ಸೇರುತ್ತಿರುವ ಗ್ರಾಮಸ್ಥರು; ಚಿಕುನ್‌ಗುನ್ಯಾ ಶಂಕೆ
ಮುಂಡಗೋಡ, ಮೇ 2: ಬಾಚಣಕಿ ಗ್ರಾಮದಲ್ಲಿ ಹಿರಿಯ, ಕಿರಿಯ, ಲಿಂಗಭೇದವಿಲ್ಲದಂತೆೆ ಜನರಿಗೆ ಜ್ವರ ಹಾಗೂ ಕೈ ಕಾಲು ಸಂದು ನೋವು ಕಾಣಿಸಿಕೊಂಡಿದೆ. ಜನರೆಲ್ಲಾ ಜ್ವರಬಾಧೆಗೆ ಒಳಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರಕಾರಿ ಆಸ್ಪತ್ರೆಯಲ್ಲಿ ನಲ್ವತ್ತಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ ಇನ್ನೂ ಕೆಲವರು ಖಾಸಗಿ ಆಸತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗವು ಹೆಚ್ಚಾಗಿ ಚಿಕ್ಕಮಕ್ಕಳನ್ನು ಭಾದಿಸತೊಡಗಿದೆ ಎಂದು ಹೇಳಲಾಗಿದೆ.
ಆರೋಗ್ಯ ಇಲಾಖೆಯು ಇದು ಚಿಕುನ್‌ಗುನ್ಯಾ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದು, ರೋಗಿಗಳ ರಕ್ತ ಹಾಗೂ ಕುಡಿಯುವ ನೀರಿನ ಮಾದರಿಯನ್ನು ತಪಾಸಣೆಗೆ ಕಳುಹಿಸಿದೆ.
ಬಾಚಣಕಿ ಗ್ರಾಮದಲ್ಲಿ ಮೂರ್ನಾಲ್ಕು ದಿನಗಳಿಂದ ಜನರಿಗೆ ಕೈ ಕಾಲು ಹಾಗೂ ಸಂದು ನೋವು ಜೊತೆಗೆ ಜ್ವರ ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಚಣಕಿ ವ್ಯಾಪ್ತಿಯ ನ್ಯಾಸರ್ಗಿ ಗ್ರಾಮದ ಜನರು ಕೂಡಾ ಜ್ವರ ಹಾಗೂ ಕೈ ಕಾಲು ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ,.
ವಿಷಯ ತಿಳಿಯುತ್ತಿದ್ದಂತೆ ಶಾಸಕ ಶಿವರಾಮ ಹೆಬ್ಬಾರ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದ್ದು, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ.