ಶೇ.25ರಷ್ಟು ವೈದ್ಯಕೀಯ ಸೀಟು ಬಿಟ್ಟುಕೊಡಲು ಡೀಮ್ಡ್ ವಿವಿಗಳಿಗೆ ಗಡುವು: ಸಚಿವ ಡಾ.ಶರಣ ಪ್ರಕಾಶ ಪಾಟೀಲ್
ಬೆಂಗಳೂರು, ಮೇ 2: ರಾಜ್ಯದಲ್ಲಿನ ಡೀಮ್ಡ್ ವಿಶ್ವ ವಿದ್ಯಾನಿಲಯಗಳ ವ್ಯಾಪ್ತಿಯಲ್ಲಿನ 9 ಕಾಲೇಜುಗಳಲ್ಲಿ ಒಟ್ಟಾರೆ ಶೇ.25ರಷ್ಟು ವೈದ್ಯಕೀಯ ಸೀಟುಗಳನ್ನು ಸರಕಾರಿ ಕೋಟಾದಡಿಯಲ್ಲಿ ನೀಡುವ ಸಂಬಂಧ ಅಭಿಪ್ರಾಯ ತಿಳಿಸಲು ಎರಡು ದಿನ ಗಡುವು ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಡೀಮ್ಡ್ ವಿವಿ ಮುಖ್ಯಸ್ಥರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಡೀಮ್ಡ್ ವಿವಿ ಕಾಯ್ದೆಯನ್ವಯ ಶೇ.25ರಷ್ಟು ಸೀಟುಗಳನ್ನು ಸರಕಾರಿ ಕೋಟಾಕ್ಕೆ ನೀಡಬೇಕು. ಆದರೆ, ಸರಕಾರದ ಕ್ರಮವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದು ಇನ್ನೂ ಇತ್ಯರ್ಥವಾಗಿಲ್ಲ ಎಂದು ವಿವರಿಸಿದರು.
ರಾಜ್ಯದಲ್ಲಿ ಡೀಮ್ಡ್ ವಿವಿ ವ್ಯಾಪ್ತಿಯಲ್ಲಿನ 9 ವೈದ್ಯಕೀಯ ಕಾಲೇಜುಗಳಿಗೆ ಒಟ್ಟು 1,630 ವೈದ್ಯಕೀಯ ಸೀಟುಗಳಿದ್ದು, ಸರಕಾರಿ ಕೋಟಾದಡಿಯಲ್ಲಿ ಕೇವಲ 127 ಸೀಟುಗಳನ್ನು ನೀಡಲಾಗುತ್ತಿದೆ. ಶೇ.25ರಷ್ಟು ನೀಡಿದರೆ ಒಟ್ಟು 400 ವೈದ್ಯಕೀಯ ಸೀಟುಗಳು ದೊರೆಯಬೇಕು ಎಂದು ಅವರು ತಿಳಿಸಿದರು.
ಕೆಎಲ್‌ಇ-200, ಸಿದ್ಧಾರ್ಥ-130, ಯೆನೆಪೊಯ-150, ಮಣಿಪಾಲ್‌ನ ಎರಡು ಕಾಲೇಜುಗಳ-450, ಜೆಎಸ್‌ಎಸ್-250, ದೇವರಾಜ ಅರಸು-150, ನಿಟ್ಟೆ ಮೀನಾಕ್ಷಿ-150, ಬಿಎಲ್‌ಡಿ-150 ಸೇರಿದಂತೆ ಒಟ್ಟು 1630 ವೈದ್ಯಕೀಯ ಸೀಟುಗಳು ಡೀಮ್ಡ್ ವಿವಿಗಳಿಗೆ ದೊರೆಯಲಿವೆ ಎಂದು ಮಾಹಿತಿ ನೀಡಿದರು.
ಸುಪ್ರೀಂಗೆ ಮನವಿ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಯಿಂದ ಪ್ರಸಕ್ತ ಶೈಕ್ಷಣಿಕ ವರ್ಷ ವಿನಾಯ್ತಿ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂಬಂಧ ರಾಜ್ಯ ಸರಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮೇ 3ರಂದು ವಿಚಾರಣೆಗೆ ಬರಲಿದ್ದು, ನಮ್ಮ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದರೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಿಇಟಿ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ನೇಮಕಾತಿ ಆದೇಶ: ಹೈ.ಕ.ಭಾಗದಲ್ಲಿ ಸಾರಿಗೆ, ಇಂಧನ, ಉನ್ನತ ಶಿಕ್ಷಣ ಸೇರಿ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಇನ್ನು 15 ದಿನಗಳಲ್ಲಿ ನೇಮಕಕ್ಕೆ ಅರ್ಜಿ ಆಹ್ವಾನಿಸಲು ಸೂಚಿಸಲಾಗಿದೆ ಎಂದ ಅವರು, ಕಲಂ 371 ‘ಜೆ’ ಅನ್ವಯ ಆ ವ್ಯಾಪ್ತಿಯಲ್ಲಿನ ವಿವಿಧ ಇಲಾಖೆಗಳಲ್ಲಿ ಖಾಲಿಯಿದ್ದ 9 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದರು.
ಸಂಪುಟ ಪುನಾರಚನೆ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿವೇಚನೆಗೆ ಬಿಟ್ಟದ್ದು, ಈ ವಿಷಯದಲ್ಲಿ ತಮ್ಮದೇನು ಪಾತ್ರವಿಲ್ಲ. ಬಿಜೆಪಿ ಸರಕಾರಕ್ಕೆ ಹೋಲಿಕೆ ಮಾಡಿದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಉತ್ತಮ ಆಡಳಿತ ನಡೆಸುತ್ತಿದೆ. ದಲಿತ ಮುಖ್ಯಮಂತ್ರಿ ಕುರಿತು ನಾನು ಪ್ರತಿಕ್ರಿಯಿಸಲಾರೆ.
-ಡಾ.ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ
ಇನ್ನೂ ಎಂಟು ವೈದ್ಯಕೀಯ ಕಾಲೇಜುಗಳ ಆರಂಭ
ಬೆಂಗಳೂರು, ಮೇ 2: ಬೌರಿಂಗ್ ಆಸ್ಪತ್ರೆ, ರಾಮನಗರ ಸೇರಿದಂತೆ ಇನ್ನೂ ಎಂಟು ವೈದ್ಯಕೀಯ ಕಾಲೇಜುಗಳನ್ನು ಇನ್ನು ಎರಡು ವರ್ಷಗಳಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬೌರಿಂಗ್ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜು ಆಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ. ರಾಮನಗರ ಆರೋಗ್ಯ ವಿವಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುತ್ತಿದೆ ಎಂದರು.
ಅದೇ ರೀತಿಯಲ್ಲಿ ವೈದ್ಯಕೀಯ ಕಾಲೇಜುಗಳು ಇಲ್ಲದ ಆರು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗುವುದೆಂದ ಅವರು, ಕಾಂಗ್ರೆಸ್ ನೇತೃತ್ವದ ಸರಕಾರ ಆಡಳಿತಕ್ಕೆ ಬಂದ ಬಳಿಕ ಆರು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಇದರಿಂದ ರಾಜ್ಯದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆ ಹೆಚ್ಚಳವಾಗಿವೆ ಎಂದರು.
ಈಗಾಗಲೇ ಕಲಬುರಗಿ, ಕೊಪ್ಪಳ ಹಾಗೂ ಗದಗ ವೈದ್ಯಕೀಯ ಕಾಲೇಜುಗಳು ಆರಂಭವಾಗಿದ್ದು, ಪ್ರಸಕ್ತ ಸಾಲಿನಿಂದ ಕಾರವಾರ, ಕೊಡಗು ಮತ್ತು ಚಾಮರಾಜನಗರ ವೈದ್ಯಕೀಯ ಕಾಲೇಜುಗಳು ಆರಂಭವಾಗಲಿದ್ದು, 450 ವೈದ್ಯಕೀಯ ಸೀಟುಗಳು ಲಭ್ಯವಾಗಲಿವೆ ಎಂದು ಹೇಳಿದರು.
ನೂತನ ವೈದ್ಯಕೀಯ ಕಾಲೇಜುಗಳಿಂದಾಗಿ ಒಟ್ಟು 900 ಹೆಚ್ಚುವರಿ ಸೀಟುಗಳು ದೊರೆಯಲಿವೆ. 16 ಸರಕಾರಿ ವೈದ್ಯಕೀಯ ಕಾಲೇಜುಗಳು, ಇಎಸ್‌ಐನ ಎರಡು ಕಾಲೇಜುಗಳು ಸೇರಿ ಒಟ್ಟು 2200 ವೈದ್ಯಕೀಯ ಸೀಟುಗಳು ದೊರೆಯಲಿವೆ ಎಂದು ಶರಣ ಪ್ರಕಾಶ್ ಪಾಟೀಲ್ ಮಾಹಿತಿ ನೀಡಿದರು.