‘ಎಸಿಬಿ’ ರಚನೆಯಿಂದ ಸಿಎಂ ಜನಪ್ರಿಯತೆ ಕುಸಿಯಿತೇ..?
- ಪ್ರಕಾಶ್ ಸಿ. ರಾಮಜೋಗಿಹಳ್ಳಿ
ಬೆಂಗಳೂರು, ಮೇ 2: ‘ಭ್ರಷ್ಟರಿಗೆ ಸಿಂಹ ಸ್ವಪ್ನ’ವಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು ನಿರ್ಜೀವಗೊಳಿಸಿ, ತಮ್ಮ ಅಧೀನದಲ್ಲೇ ಭ್ರಷ್ಟಾಚಾರ ನಿಗ್ರಹಕ್ಕೆ ‘ಭ್ರಷ್ಟಾಚಾರ ನಿಗ್ರಹ ದಳ’(ಎಸಿಬಿ) ರಚನೆಯಿಂದಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯರ ‘ಜನಪ್ರಿಯತೆ’ ಕುಸಿಯಿತೆಂಬುದಕ್ಕೆ ನಗರ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಹೌದು ಎನ್ನುತ್ತದೆ.
ಮೇಲ್ದರ್ಜೇರಿಸಲ್ಪಟ್ಟ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಸೇರಿದಂತೆ 52 ಸ್ಥಳೀಯ ಸಂಸ್ಥೆಗಳ ಫಲಿತಾಂಶ ರಾಜ್ಯ ಸರಕಾರಕ್ಕೆ ತೀವ್ರ ಹಿನ್ನೆಡೆಯಾಗಿರುವುದನ್ನು ಖಚಿತಪಡಿಸಿದೆ. ಬಹುತೇಕ ಸಂದರ್ಭಗಳಲ್ಲಿ ಭ್ರಷ್ಟಾಚಾರದ ಬಲಿಪಶುಗಳಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸುವ ‘ಅಹಿಂದ’ ವರ್ಗ.
ಆದರೆ, ಸಿಎಂ ಸಿದ್ದರಾಮಯ್ಯ ಆ ವರ್ಗದ ವಿರೋಧವನ್ನು ಲೆಕ್ಕಿಸದೆ ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಿದ ಅಪಕೀರ್ತಿಗೆ ಗುರಿಯಾಗಿದ್ದಾರೆ. ಅಲ್ಲದೆ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುತ್ತಿದ್ದ ಐಎಎಸ್ ಅಧಿಕಾರಿಗಳ ಲಾಬಿಗೆ ಮಣಿದೇ ತರಾತುರಿಯಲ್ಲಿ ‘ಎಸಿಬಿ’ ರಚಿಸಲಾಗಿದೆ ಎಂಬುದು ಸಾರ್ವಜನಿಕರ ಅಭಿಮತ.
ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಶಿಸ್ತಿನ ಪ್ರಕರಣಗಳು ಸೇರಿ ಆಡಳಿತದ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ 1984ರಲ್ಲಿ ಲೋಕಾಯುಕ್ತ ಸಂಸ್ಥೆ ಸ್ಥಾಪಿಸಲಾಗಿತ್ತು. ಲೋಕಾಯುಕ್ತದಲ್ಲಿ ನ್ಯಾಯಾಧೀಶರು, ಕಾನೂನು ತಜ್ಞರು, ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಗಳು, ಎಂಜಿನಿಯರಿಂಗ್ ಹಾಗೂ ಸಾಂಖಿಕ ವಿಭಾಗದ ಪರಿಣಿತರು ಇರುತ್ತಾರೆ.
ಹೀಗಾಗಿ ಲೋಕಾಯುಕ್ತ ದಾಳಿ ಮತ್ತು ಆ ಬಳಿಕ ಖಚಿತತೆ ಆಧಾರದ ಮೇಲೆ ಭ್ರಷ್ಟರ ವಿರುದ್ಧ ದೂರು ದಾಖಲಿಸುವುದಲ್ಲದೆ, ಭ್ರಷ್ಟಾಚಾರದಲ್ಲಿ ತೊಡಗುವ ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಿಕ್ಷೆಯೂ ಆಗುತ್ತಿತ್ತು. ತನಿಖೆಯಲ್ಲಿನ ನಿಖರತೆಯ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರಾಗೃಹಕ್ಕೆ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಲೋಕಾಯುಕ್ತ ಸಂಸ್ಥೆ ಒಂದು ರೀತಿಯಲ್ಲಿ ಭ್ರಷ್ಟರ ನಿಗ್ರಹಕ್ಕಾಗಿ ಇದ್ದ ವಿಶ್ವ ವಿದ್ಯಾನಿಲಯವೇ ಸರಿ. ಆದರೆ, ಇದೀಗ ರಾಜ್ಯ ಸರಕಾರ ಸ್ಥಾಪಿಸಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಪ್ರಾಥಮಿಕ ಶಾಲೆ ಎಂದು ಹೇಳಿದರೆ ಖಂಡಿತ ಉತ್ಪ್ರೇಕ್ಷೆಯಲ್ಲ ಎಂಬುದು ಕಾನೂನು ತಜ್ಞರ ಅಭಿಮತ.
ಲೋಕಾ ಮೇಲೆ ಎಸಿಬಿ ದುಷ್ಪರಿಣಾಮ: ಎಸಿಬಿ ಸೃಜನೆಯಿಂದ ಲೋಕಾಯುಕ್ತ ಅಧಿಕಾರಕ್ಕೆ ಯಾವುದೇ ದುಷ್ಪರಿಣಾಮವಿಲ್ಲ. ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984ಕ್ಕೆ ಯಾವುದೇ ತಿದ್ದುಪಡಿ ಮಾಡಿಲ್ಲ. ಆ ಪ್ರಸ್ತಾವವೂ ಇಲ್ಲ ಎಂದು ರಾಜ್ಯ ಸರಕಾರ ಎಸಿಬಿ ರಚನೆಗೆ ಸಂಬಂಧಿಸಿದಂತೆ ತನ್ನನ್ನು ಪದೇ ಪದೇ ಸಮರ್ಥಿಸಿಕೊಳ್ಳುತ್ತಿದೆ.
ಆದರೆ, ಲೋಕಾಯುಕ್ತದ ಪೊಲೀಸ್ ವಿಭಾಗವನ್ನು ಪೊಲೀಸ್ ಠಾಣೆಗಳೆಂದು ಘೋಷಿಸಿರುವ ಅಧಿಸೂಚನೆಯನ್ನು ಹಿಂಪಡೆಯಲು ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಜ್ಯಪತ್ರದಲ್ಲೇ ಉಲ್ಲೇಖಿಸಿದೆ. ಈ ಅಂಶವೂ ಹಲವು ಅನುಮಾನಗಳನ್ನು ಸೃಷ್ಟಿಸಿದೆ.
ಅಲ್ಲದೆ, ಹಂತ-ಹಂತವಾಗಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿ ‘ಎಸಿಬಿ’ಯನ್ನು ಭ್ರಷ್ಟರ ನಿಗ್ರಹಕ್ಕಿರುವ ಒಂದು ನಾಮಕಾವಸ್ಥೆ ಸಂಸ್ಥೆಯನ್ನಾಗಿಸುವ ಹುನ್ನಾರ ಅಡಗಿದೆ. ಹೀಗಾಗಿಯೇ ಲೋಕಾಯುಕ್ತ ನ್ಯಾಯಮೂರ್ತಿಯ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ಪ್ರಸ್ತಾವನೆಗೆ ಅಂಕಿತ ಹಾಕುವಂತೆ ಅವರ ಮೇಲೆ ಒತ್ತಡ ಹಾಕುವ ಪ್ರಯತ್ನ ನಡೆಯುತ್ತಿಲ್ಲ ಎಂದು ಜನ ಸಾಮಾನ್ಯರ ಆರೋಪವಾಗಿದೆ.
ರಾ ಜ್ಯದಲ್ಲಿ ಈ ಹಿಂದೆಯೇ ಭ್ರಷ್ಟಾಚಾರ ನಿಗ್ರಹಕ್ಕೆ ಭ್ರಷ್ಟಾಚಾರ ನಿಗ್ರಹ ದಳ ಇತ್ತು. 1984ರಲ್ಲಿ ಜನತಾ ಪಕ್ಷದ ನೇತೃತ್ವದ ಸರಕಾರ ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತಂದಿತು. ಆ ಕಾಯ್ದೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸಂಸ್ಥೆ ಎಂಬ ಸ್ಪಷ್ಟ ಉಲ್ಲೇಖವಿದೆ. ಈ ಲೋಕಾಯುಕ್ತ ಸಂಸ್ಥೆಯಿಂದ ರಾಜ್ಯದಲ್ಲಿ ಏನೇನಾಯಿತು ಎಂಬುದು ಜನತೆಗೆ ಗೊತ್ತಿದೆ. ಇಂತಹ ಬಲಿಷ್ಠ ಕಾಯ್ದೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ದುರ್ಬಲಗೊಳಿಸಿ, ಎಸಿಬಿ ಎಂಬ ಕೆಲಸಕ್ಕೆ ಬಾರದ ಕಾಯ್ದೆಯನ್ನು ಜಾರಿಗೆ ತಂದಿದೆ.
ಅಲ್ಲದೆ, ದೇಶದ 12ರಾಜ್ಯಗಳಲ್ಲಿ ಎಸಿಬಿ ಕಾರ್ಯ ನಿರ್ವಹಿಸುತ್ತಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಆ 12ರಾಜ್ಯಗಳಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ‘ಎಸಿಬಿ’ ಹೇಗೆ ಕಾರ್ಯ ನಿರ್ವಹಿಸುತ್ತಿದೆ, ಎಷ್ಟು ಪ್ರಕರಣಗಳನ್ನು ದಾಖಲಿಸಿದೆ, ಎಷ್ಟು ಮಂದಿ ಭ್ರಷ್ಟರನ್ನು ಜೈಲಿಗೆ ಕಳುಹಿಸಿದೆ ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಉತ್ತರ ನೀಡಬೇಕು. ಅಷ್ಟಕ್ಕೂ ಈ ಎಸಿಬಿ ಬಗ್ಗೆ ನಾಡಿನ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಮಾಹಿತಿಯನ್ನೇ ನೀಡಿಲ್ಲ. ‘ಎಸಿಬಿ’ಗೆ ತನಿಖೆಯ ಅಧಿಕಾರವೇ ಇಲ್ಲ. ಒಬ್ಬ ಅಧಿಕಾರಿ ಅಥವಾ ಮಂತ್ರಿಯ ವಿರುದ್ಧ ದೂರು ದಾಖಲಿಸಿಕೊಳ್ಳುವ ಮೊದಲು, ಸಚಿವ ಸಂಪುಟದ ಅನುಮತಿ ಪಡೆಯಬೇಕಂತೆ. ಹೀಗಾದರೆ ಭ್ರಷ್ಟನನ್ನು ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸಲಾಗುತ್ತದೆಯೇ? ನನಗೆ ಗೊತ್ತಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಐದು ದೂರುಗಳಿವೆ ಎಂದು ಕೇಳಿದ್ದೇನೆ. ಮೊದಲು ಎಸಿಬಿ ಅಧಿಕಾರಿಗಳು ಪತ್ರ ಬರೆಯುತ್ತಾರೆ. ಅದನ್ನು ಸಂಪುಟದಲ್ಲಿಟ್ಟು ಅನುಮತಿ ಪಡೆಯುವುದು ಸಾಧ್ಯವೇ, ಪ್ರಕರಣ ಮುಚ್ಚಿಹಾಕುವ ತಂತ್ರವಲ್ಲವೇ? ಒಟ್ಟಿನಲ್ಲಿ ಇದು ನಾಡಿನ ಜನತೆಯನ್ನು ದಾರಿ ತಪ್ಪಿಸಲು ಬಳಕೆಯಾಗುತ್ತಿರುವ ತಂತ್ರ. ಜನತೆಗೆ ಬಗೆಯುತ್ತಿರುವ ದ್ರೋಹ.
-ಸಂತೋಷ್ ಹೆಗ್ಡೆ, ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ