ಪೊಲೀಸರ ತಪ್ಪಿದ್ದರೆ ನಿರ್ದಾಕ್ಷಿಣ್ಯ ಕ್ರಮ: ಡಾ.ಪರಮೇಶ್ವರ್

Update: 2016-05-02 18:06 GMT

ಬೆಂಗಳೂರು, ಮೇ 2: ಕತ್ರಿಗುಪ್ಪೆಯಲ್ಲಿ ಮಣಿಪುರ ಮೂಲದ ಯುವತಿಯ ಅಪಹರಣ ಹಾಗೂ ಅತ್ಯಾಚಾರಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿವರವನ್ನು ಸಂಗ್ರಹಿಸುತ್ತಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದ್ದು, ಪೊಲೀಸರ ತಪ್ಪಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪೊಲೀಸ್ ಇಲಾಖೆಯಲ್ಲಿರುವ ಹಲವಾರು ವೈಫಲ್ಯಗಳು ನನ್ನ ಗಮನಕ್ಕೆ ಬಂದಿವೆ. ಅವುಗಳನ್ನೆಲ್ಲ ಸರಿಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಡಿಸಿಪಿ ವಿಚಾರಣೆ: ಪಿಜಿ ಎದುರು ನಿಂತಿದ್ದ ಯುವತಿಯನ್ನು ಎ.23ರಂದು ರಾತ್ರಿ 9:50ರ ಸುಮಾರಿಗೆ ಜನಸಂದಣಿ ಇರುವ ಪ್ರದೇಶದಿಂದ ಯುವಕನೊಬ್ಬ ಎಳೆದುಕೊಂಡ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಎಸಿಪಿ, ಇನ್‌ಸ್ಪೆಕ್ಟರ್, ಎಸ್ಸೈ, ಸಿಬ್ಬಂದಿಯ ವಿಚಾರಣೆ ನಡೆಸಿದ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್‌ಕುಮಾರ್ ಎಲ್ಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಪೊಲೀಸರಿಂದ ನಿರ್ಲಕ್ಷವಾಗಿಲ್ಲ: ಆಯುಕ್ತ ಮೇಘರಿಕ್
ಬೆಂಗಳೂರು, ಮೇ 2: ಯುವತಿಯನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಪೊಲೀಸರಿಂದ ನಿರ್ಲಕ್ಷವಾಗಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಸ್ಪಷ್ಟಣೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಘಟನೆ ಬಗ್ಗೆ ಎ.23ರಂದೇ ಸ್ಥಳೀಯರಿಂದ ಮಾಹಿತಿ ಸಿಕ್ಕ ತಕ್ಷಣ ಚೀತಾ ಪೊಲೀಸರು ಸ್ಥಳಕ್ಕೆ ತೆರಳಿದರು. ಈ ಸಂಬಂಧ ದೂರು ನೀಡುವಂತೆ ಪಿಜಿ ಮಾಲಕ ಹಾಗೂ ಸಂತ್ರಸ್ತೆ ಯುವತಿಯನ್ನು ತಿಳಿಸಲಾಗಿತ್ತು. ಆದರೆ, ಇಬ್ಬರೂ ದೂರು ನೀಡಲು ಹಿಂಜರಿದಿದ್ದರು ಎಂದರು.
ಈ ಪ್ರಕರಣದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ. ಇಂದು ವಿಚಾರ ಬಹಿರಂಗವಾಗಿರುವುದರಿಂದ ಮಾಹಿತಿ ಪಡೆದು ಸ್ಥಳೀಯ ಡಿಸಿಪಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದೇನೆ ಎಂದು ಅವರು ಹೇಳಿದರು.

ಪಿಜಿ ಮಾಲಕ ಮಂಜುನಾಥ್‌ರಿಂದ ದೂರು ಪಡೆಯಲಾಗಿದ್ದು, ಆದಷ್ಟು ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು. ಸಂತ್ರಸ್ತ ಯುವತಿ ಪೊಲೀಸರಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸದಿದ್ದರೆ ಸಾಕ್ಷಿ ಸಂಗ್ರಹ ಕಷ್ಟವಾಗುತ್ತದೆ ಎಂದ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News