ಕೋರ್ಟ್‌ನಲ್ಲಿ ಕಣ್ಣೀರಿಟ್ಟ ಬಿಎಸ್‌ವೈ
ಬೆಂಗಳೂರು, ಮೇ 2: ಪ್ರೇರಣಾ ಟ್ರಸ್ಟ್‌ಗೆ ಕಿಕ್ ಬ್ಯಾಕ್ ಪಡೆದ ಆರೋಪ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆಯೇ ಕಣ್ಣೀರಿಟ್ಟಿರುವ ಪ್ರಸಂಗ ನಡೆದಿದೆ. ನನ್ನ ವಿರುದ್ಧ ರಾಜಕೀಯ ಪಿತೂರಿ ಮಾಡಲಾಗಿದ್ದು, ನಾನೇನು ತಪ್ಪುಮಾಡಿಲ್ಲ ಎಂದು ಹೇಳುತ್ತಲೇ ಕಣ್ಣೀರಿಡುತ್ತಾ ನ್ಯಾಯಪೀಠದ ಪ್ರಶ್ನೆಗಳಿಗೆ ಉತ್ತರ ನೀಡಿದರು. 11 ಗಂಟೆಗೆ ಸಿಬಿಐ ಕೋರ್ಟ್‌ಗೆ ಯಡಿ ಯೂರಪ್ಪಹಾಜರಾದರು. 11:30ಕ್ಕೆ ಸಿಬಿಐ ಕೋರ್ಟ್ ನ್ಯಾಯಾಧೀಶ ನ್ಯಾ.ಬಿ.ಕೆ.ನಾಯ್ಕಾ ಅವರು ಸಾಕ್ಷಿ ವಿಚಾರಣೆ ಆರಂಭಿಸಿ ಮೊದಲೇ ಸಿದ್ಧಪಡಿಸಿಕೊಂಡಿದ್ದ 473 ಪ್ರಶ್ನೆಗಳನ್ನು ಯಡಿಯೂರಪ್ಪಅವರಿಗೆ ಸ್ವತಃ ಕೇಳಿ ಉತ್ತರಗಳನ್ನು ದಾಖಲಿಸಿಕೊಂಡರು.
ಸೌತ್ ವೆಸ್ಟ್ ಮೈನಿಂಗ್ ಕಂಪೆನಿಯಿಂದ ಪ್ರೇರಣಾ ಟ್ರಸ್ಟ್‌ಗೆ ದೇಣಿಗೆ ರೂಪದಲ್ಲಿ 20 ಕೋಟಿ ಕಿಕ್ ಬ್ಯಾಕ್ ಪಡೆದುಕೊಂಡು ಮೈನಿಂಗ್ ಕಂಪೆನಿಗೆ ಲಾಭ ಮಾಡಿಕೊಡಲಾಗಿದೆ. ಪ್ರತಿಯಾಗಿ ರಾಚೇನಹಳ್ಳಿಯಲ್ಲಿ ಕಡಿಮೆ ಬೆಲೆಯ ಭೂಮಿಯನ್ನು 20 ಕೋಟಿಗೆ ಮಾರಾಟ ಮಾಡಿ ಸರಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಲಾಗಿದೆ ಎಂದು ಸಿಬಿಐ ಪೊಲೀಸರು ಸಲ್ಲಿಸಿದ್ದ ಆರೋಪಪಟ್ಟಿಯ ಆಧಾರದಲ್ಲಿಯೇ ಪ್ರಶ್ನೆಗಳನ್ನು ಕೇಳಲಾಯಿತು.
42 ಪ್ರಶ್ನೆಯವರೆಗೂ ಯಡಿಯೂರಪ್ಪ ಸಮಾಧಾನದಿಂದಲೇ ನನಗೆ ಗೊತ್ತಿಲ್ಲ ಎನ್ನುವ ಉತ್ತರ ನೀಡಿದರು. ನಂತರದ ಕೆಲ ಪ್ರಶ್ನೆಗಳಿಗೆ ಇರಬಹುದು, ಎಂದು ಇನ್ನು ಕೆಲ ಪ್ರಶ್ನೆಗಳಿಗೆ ನನಗೆ ಗೊತ್ತು, ಕಾನೂನುಬದ್ಧವಾಗಿ ಮಾಡಿದ್ದೇನೆ ಎಂದರು. ಆದರೆ ಖಾಸಗಿ ದೂರು ದಾಖಲು ಕುರಿತ 470ನೆ ಪ್ರಶ್ನೆ ಕೇಳಿದಾಗ ಯಡಿಯೂರಪ್ಪಗದ್ಗದಿತರಾದರು. ರಾಜಕೀಯ ದುರುದ್ದೇಶದಿಂದ ದೂರು ದಾಖಲು ಮಾಡಲಾಗಿದೆ. ಹೈಕೋರ್ಟ್ ಈ ಪ್ರಕರಣಗಳನ್ನು ರದ್ದುಗೊಳಿಸಿದೆ ಎಂದರು.
ಕಡೆಗೆ ನೀವು ಏನಾದರೂ ಹೇಳುವುದಿದೆಯೇ ಎಂದು ನ್ಯಾಯಾಧೀಶ ಯಡಿಯೂರಪ್ಪಅವರನ್ನು ಕೇಳುತ್ತಿದ್ದಂತೆ ಯಡಿಯೂರಪ್ಪಅವರ ಕಣ್ಣಂಚುಗಳು ಒದ್ದೆಯಾದವು. ಮುಖ್ಯಮಂತ್ರಿಯಾಗಿದ್ದಾಗ ನಾನು ನನ್ನ ಅಧಿಕಾರ ವ್ಯಾಪ್ತಿಯಲ್ಲಿಯೇ ಕೆಲಸ ಮಾಡಿದ್ದೇನೆ, ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ, ಬೊಕ್ಕಸಕ್ಕೆ ನಷ್ಟವನ್ನುಂಟುಮಾಡಿಲ್ಲ. ಬದಲಿಗೆ ಲಾಭ ತರುವಂತಹ ಕೆಲಸ ಮಾಡಿದ್ದೇನೆ, ಜನಹಿತ ಕಾರ್ಯಗಳನ್ನೇ ಮಾಡಿದ್ದೇನೆ ಎಂದು ಒಂದೊಂದೇ ಪದವನ್ನು ಹೇಳುತ್ತಾ ಕಣ್ಣೀರಿಟ್ಟರು. ಪ್ರಕರಣ ಸಂಬಂಧ ಬೇರೆ ಯಾವುದಾದರೂ ಸಾಕ್ಷಿ ನೀಡುವುದಿದೆಯೇ ಎಂದು 473ನೆ ಪ್ರಶ್ನೆ ಕೇಳುತ್ತಿದ್ದಂತೆ ಯಡಿಯೂರಪ್ಪಉತ್ತರಿಸಲೂ ಆಗದೆ ಕುಳಿತರು. ಅವರ ಪರ ವಕೀಲರೇ ಯಾವುದೂ ಇಲ್ಲ ಎಂದು ನ್ಯಾಯಾಲಯಕ್ಕೆ ಉತ್ತರ ನೀಡಿದರು. ಎಲ್ಲ 473 ಪ್ರಶ್ನೆಗಳಿಗೂ ಯಡಿಯೂರಪ್ಪಅವರಿಂದ ಉತ್ತರ ಪಡೆದುಕೊಂಡ ಬಳಿಕ ಪ್ರಶ್ನೋತ್ತರವನ್ನೊಳಗೊಂಡ 125 ಪುಟಗಳ ವಿವರಣಾ ಪ್ರತಿಗಳಿಗೆ ಯಡಿಯೂರಪ್ಪಅವರಿಂದ ಸಹಿ ಪಡೆದುಕೊಂಡು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದರು.