ಗೋಣಿಬೀಡು: ಸೈಯದ್ ಶರ್ಫುದ್ದೀನ್ ಶಾಖಾದ್ರಿ ಮತ್ತು ಹಜ್ರತ್ ಸೈದಾನಿ ಬೀಬಿ ದರ್ಗಾದಲ್ಲಿ ಉರೂಸ್
ಮೂಡಿಗೆರೆ, ಮೇ.2: ತಾಲೂಕಿನ ಗೋಣಿಬೀಡುವಿನಲ್ಲಿರುವ ಅಲ್‌ಹಾಜ್ ಸೈಯದ್ ಶರ್ಫುದ್ದೀನ್ ಶಾಖಾದ್ರಿ ಮತ್ತು ಹಜ್ರತ್ ಸೈದಾನಿ ಬೀಬಿ ದರ್ಗಾದಲ್ಲಿ ಉರೂಸ್ ಕಾರ್ಯಕ್ರಮ ನಡೆಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ದಫ್ ಕುಣಿತದೊಂದಿಗೆ ಸಂದಲ್ ಮೆರವಣಿಗೆ ನಡೆಯಿತು. ಪದ್ಧತಿಯಂತೆ ಚಾದರ್ ಸಮರ್ಪಣೆ ಮಾಡಲಾಯಿತು. ಪ್ರಾರ್ಥನೆಯೊಂದಿಗೆ ಧಾರ್ಮಿಕ ಕಾರ್ಯಗಳು ನೆರವೇರಿದವು. ಬಳಿಕ ಸೀರಣಿ ವಿತರಣೆ, ಅನ್ನದಾನ ನಡೆಯಿತು.
ಉರೂಸ್ ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮಗಳಿಂದಷ್ಟೇ ಅಲ್ಲದೆ ಬೆಂಗಳೂರು, ತಮಿಳುನಾಡಿನಿಂದ ಆಗಮಿಸಿದ್ದ ಜನರು ಭಾಗವಹಿಸಿದ್ದರು. ಧರ್ಮಾತೀತವಾಗಿ ಭಕ್ತಾದಿಗಳು ಭೇಟಿ ನೀಡುವ ಶ್ರದ್ಧಾಕೇಂದ್ರವಾಗಿರುವ ಇಲ್ಲಿ ಪ್ರತಿ ವರ್ಷ ಉರೂಸ್ ಜರಗುತ್ತದೆ. ತಮ್ಮ ಬದುಕಿನ ಸಂಕಷ್ಟಗಳು ಪರಿಹಾರವಾಗಲಿ, ಯಾವುದೇ ಕಾಯಿಲೆ-ಕಂಟಕಗಳು ಬಾರದಿರಲಿ, ಜೀವನದಲ್ಲಿ ಅಂದುಕೊಂಡ ಕಾರ್ಯಗಳು ಯಶಸ್ವಿಯಾಗಲಿ ಎಂದು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಈ ದರ್ಗಾದಲ್ಲಿ ಪ್ರಾರ್ಥಿಸುತ್ತಾರೆ. ದರ್ಗಾದ ಎದುರು ಇರುವ ಶೇಖ್ ಮೊಹಿಯುದ್ದೀನ್ ಕಟ್ಟೆಗೆ ಪ್ರದಕ್ಷಿಣೆ ಹಾಕಿದರೆ ಜೀವನದಲ್ಲಿ ಉದ್ಭವಿಸಬಹುದಾದ ಹಲವು ಸಮಸ್ಯೆಗಳು ತೊಲಗುತ್ತದೆಂಬ ನಂಬಿಕೆ ಭಕ್ತರಲ್ಲಿದೆ.