ಸಿಇಟಿ ಪರೀಕ್ಷೆ ಪಾರದರ್ಶಕವಾಗಿ ನಡೆಸಲು ಸೂಚನೆ
ದಾವಣಗೆರೆ, ಮೇ 3: ಮೇ 4 ಮತ್ತು 5ರಂದು ಜಿಲ್ಲೆಯಲ್ಲಿ ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ 2016-17)ಯನ್ನು ಕಟ್ಟುನಿಟ್ಟಾಗಿ ಹಾಗೂ ಪಾರದರ್ಶಕವಾಗಿ ನಡೆಯಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹೀಂ ಮೈಗೂರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಿಇಟಿ ಪರೀಕ್ಷೆ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ 2016ನೆ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯು ಮೇ 4 ಮತ್ತು 5ರಂದು ನಡೆಯಲಿದ್ದು, ಈ ಎರಡು ದಿನದ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 7,280 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಾಗಿ ನಗರದಲ್ಲಿ ಒಟ್ಟು 17 ಪರೀಕ್ಷಾ ಕೇಂದ್ರ ತೆರೆಯಲಾಗಿದೆ ಎಂದು ವಿವರಿಸಿದರು.
ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆಯಲು ಹಾಗೂ ಅವ್ಯವಹಾರ ತಡೆಗಟ್ಟುವ ಸಲುವಾಗಿ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಎ ಮತ್ತು ಬಿ ದರ್ಜೆ ಜಿಲ್ಲಾ ಮಟ್ಟದಅಧಿಕಾರಿಗಳನ್ನು ವೀಕ್ಷಕರಾಗಿ ನೇಮಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಈ ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚಬೇಕು ಎಂದು ಹೇಳಿದರು.
ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ವಿತರಿಸಲು ಪೊಲೀಸ್ ಬೆಂಗಾವಲು ವ್ಯವಸ್ಥೆಯೊಂದಿಗೆ ಬಿ-ದರ್ಜೆ ಅಧಿಕಾರಿಗಳನ್ನು ಮಾರ್ಗ ಅಧಿಕಾರಿಗಳಾಗಿ ನೇಮಿಸಲಾಗಿದೆ. ಪರೀಕ್ಷಾ ವೀಕ್ಷಣೆಗಾಗಿ ನಾಲ್ಕು ಮಂದಿ ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದ್ದು, ಈ ನಾಲ್ವರ ಪೈಕಿ ಮೂರು ಮಂದಿಯನ್ನೊಳಗೊಂಡ ತಂಡದ ಕಮಿಟಿಯನ್ನು ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಸಿಬ್ಬಂದಿ ನೇಮಕಕ್ಕೆ ಈಗಾಗಲೇ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ.ಅಲ್ಲದೆ, ಪೊಲೀಸರ ಸಹಾಯ ಪಡೆಯಲು ಪರೀಕ್ಷಾ ಕೇಂದ್ರಗಳಾಗಿ ಇರುವ ಕಾಲೇಜಿನ ಆಡಳಿತ ಮಂಡಳಿಯು ಜವಾಬ್ದಾರಿ ಪಡೆಯಬೇಕು. ಪರೀಕ್ಷಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಪರೀಕ್ಷೆಗೆ ಹಾಜರಾಗುವಂತಹ ವಿದ್ಯಾರ್ಥಿಗಳಿಗೆ ಯಾವುದೇ ಅಡಚಣೆ ಉಂಟಾಗದ ರೀತಿಯಲ್ಲಿ ಸಹಾಯ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಿದರು.
ಪರೀಕ್ಷಾ ಕೇಂದ್ರಗಳಿಗೆ ಕೈಗಡಿಯಾರ, ಕ್ಯಾಲ್ಕುಲೇಟರ್, ಮೊಬೈಲ್‌ನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪರೀಕ್ಷೆಯ ವೀಕ್ಷಕರಾಗಿ ನೇಮಕವಾದಅಧಿಕಾರಿಗಳು ಸಹ ತಮ್ಮ ಮೊಬೈಲ್‌ಗಳನ್ನು ಪರೀಕ್ಷೆ ವೇಳೆ ಬಳಕೆ ಮಾಡಬಾರದು. ಮಾರ್ಗಾಧಿಕಾರಿಗಳು ಪೊಲೀಸ್ ರಕ್ಷಣೆ ಇಲ್ಲದೆ ಪರೀಕ್ಷಾ ಕೇಂದ್ರಗಳಲ್ಲಿ ಪರಿಶೀಲನೆಗೆ ತೆರಳುವಂತಿಲ್ಲ ಎಂದು ತಾಕೀತು ಮಾಡಿದರು. ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಇಂತಹ ಗಂಭೀರ ವಿಚಾರಗಳಲ್ಲೊಂದಾದ ಸಿಇಟಿ ಪರೀಕ್ಷೆಯಲ್ಲೂ ಯಾವುದೇ ಅಕ್ರಮಗಳಿಗೆ ಆಸ್ಪದ ನೀಡದೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಡಿಡಿಪಿಯು ಬಿ.ಆರ್. ವಿಜಯಾನಂದ್, ಡಿಡಿಪಿಐ ಎಚ್.ಎಂ. ಪ್ರೇಮಾ, ಬಿಇಒ ಬಸವರಾಜಪ್ಪಉಪಸ್ಥಿತರಿದ್ದರು.
ಮೀನುಗಾರಿಕಾ ಇಲಾಖೆಯ ನೇಮಕಾತಿಗೆ ಪರೀಕ್ಷೆ: ಮೇ 6ರಂದುಮೀನುಗಾರಿಕಾ ಇಲಾಖೆಯ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಗೆ ಒಟ್ಟು 1,376 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅಂದು ಬೆಳಗ್ಗೆ 10:30 ರಿಂದ 12:30ರವರೆಗೆ ಸಾಮಾನ್ಯ ಕನ್ನಡ ಹಾಗೂ ಸಾಮಾನ್ಯ ಜ್ಞಾನ ವಿಷಯಕ್ಕೆ ಪರೀಕ್ಷೆ ನಡೆಯಲಿದೆ ಎಂದು ಇಲಾಖಾ ಪ್ರಕಟನೆ ತಿಳಿಸಿದೆ.
ಕೇಂದ್ರಗಳು: ಮೋತಿವೀರಪ್ಪ ಸರಕಾರಿ ಪದವಿ ಪೂರ್ವ ಕಾಲೇಜು, ಎವಿಕೆ ಮಹಿಳಾ ಪದವಿ ಪೂರ್ವ ಕಾಲೇಜು, ಎಆರ್‌ಜಿ ಪದವಿ ಪೂರ್ವ ಕಾಲೇಜು, ಪಿ.ಜೆ.ಬಡಾವಣೆಯ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಪಿಜೆ ಬಡಾವಣೆಯ ಡಿಆರ್‌ಎಂ ವಿಜ್ಞಾನ ಪದವಿ ಪೂರ್ವ ಕಾಲೇಜು, ರಾಜನಹಳ್ಳಿ ಸೀತಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜು, ಅನುಭವ ಮಂಟಪದ ತರಳಬಾಳು ಜಗದ್ಗುರು ಪದವಿ ಪೂರ್ವ ಕಾಲೇಜು, ಕೆ.ಆರ್. ರಸ್ತೆಯ ಸರಕಾರಿ ಪದವಿ ಪೂರ್ವ ಕಾಲೇಜು, ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಸಿದ್ದಲಿಂಗೇಶ್ವರ ನಗರದ ಸಿದ್ದಗಂಗಾ ಪದವಿಪೂರ್ವ ಕಾಲೇಜು, ನಿಜಲಿಂಗಪ್ಪ ಬಡಾವಣೆಯ ಎಸ್.ಎಲ್. ಪದವಿ ಪೂರ್ವ ಕಾಲೇಜು, ಜಿಎಂಐಟಿ ಕ್ಯಾಂಪಸ್‌ನ ಜಿಎಮ್ ಹಾಲಮ್ಮ ಪದವಿಪೂರ್ವ ಕಾಲೇಜು, ನೂತನ ಸ್ವತಂತ್ರ ಪೂರ್ವ ಕಾಲೇಜು, ಎಂಎಸ್‌ಬಿ ಪದವಿ ಪೂರ್ವ ಕಾಲೇಜು, ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜು, ಸಂತ ಜಾನ್ಸ್ ಪದವಿ ಪೂರ್ವ ಕಾಲೇಜು, ಪುಷ್ಪ ಮಹಾಲಿಂಗಪ್ಪ ಪದವಿ ಪೂರ್ವ ಕಾಲೇಜು.
ವೇಳಾಪಟ್ಟಿ: ಮೇ 4: ಬೆಳಗ್ಗೆ 10:30 ರಿಂದ 11:50ರವರೆಗೆ ಜೀವಶಾಸ್ತ್ರ ಪರೀಕ್ಷೆ
ಮಧ್ಯಾಹ್ನ 2:30ರಿಂದ 3:50ರವರೆಗೆ ಗಣಿತ ಶಾಸ್ತ್ರ ಪರೀಕ್ಷೆ
ಮೇ 5: ಬೆಳಗ್ಗೆ 10:30 ರಿಂದ 11:50ರವರೆಗೆ ಭೌತಶಾಸ್ತ್ರ ಪರೀಕ್ಷೆ
ಮಧ್ಯಾಹ್ನ 2:30ರಿಂದ 3:50ರವರೆಗೆ ರಸಾಯನ ಶಾಸ್ತ್ರ ಪರೀಕ್ಷೆ