ಆಧಾರ್ ಮಾಹಿತಿ ನೀಡಲು ಮುಗಿಬಿದ್ದ ನಾಗರಿಕರು
ಶಿವಮೊಗ್ಗ, ಮೇ 3: ಬಯೋ ಮೆಟ್ರಿಕ್ ವಿವರ ಕೊಟ್ಟಿದ್ದಾಯ್ತು, ಭಾವಚಿತ್ರ ಸಹಿತ ಮತದಾರರ ಚೀಟಿ (ಎಪಿಕ್ ಕಾರ್ಡ್)ಯ ವಿವರ ನೀಡಿದ್ದಾಯ್ತು, ಪಡಿತರ ಚೀಟಿಯ ನವೀಕರಣವೂ ಮಾಡಿಸಿದ್ದಾಯ್ತು, ಇದೀಗ ಆಧಾರ್ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಪಡಿತರ ಚೀಟಿಯ ಕಾರಣದಿಂದಲೇ ತಿಂಗಳಿಗೊಮ್ಮೆ ಸರಕಾರಿ-ಖಾಸಗಿ ಕಚೇರಿ ಅಲೆಯುವಂತಾಗಿದೆ. ಹಣ-ಸಮಯ ವ್ಯಯಿಸುವಂತಾಗಿದೆ. ಆಹಾರ ಇಲಾಖೆಯವರು ಮನಸೋಇಚ್ಛೆ ಆದೇಶ ಹೊರಡಿಸುತ್ತಿದ್ದಾರೆ. ಇವರ ತುಘಲಕ್ ದರ್ಬಾರ್‌ನಿಂದ ಬಡ, ಅನಕ್ಷರಸ್ಥ, ಅಂಗವಿಕಲ, ವಯೋವೃದ್ಧ ಪಡಿತರ ಚೀಟಿದಾರರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.
ಇದು, ಶಿವಮೊಗ್ಗ ನಗರದ ಬಿಪಿಎಲ್ ಪಡಿತರ ಚೀಟಿದಾರರೊಬ್ಬರ ಆಕ್ರೋಶಭರಿತ ಮಾತುಗಳು. ಹೌದು, ಇತ್ತೀಚೆಗೆ ಕೇಂದ್ರ ಸರಕಾರವು ಆಧಾರ್ ಕಾಯ್ದೆ 2016ನ್ನು ಜಾರಿಗೊಳಿಸಿದ್ದು, ಈ ಕಾಯ್ದೆಯ ಸೆಕ್ಷನ್ (7) ರನ್ವಯ ಸಾರ್ವಜನಿಕ ವಿತರಣಾ ಪದ್ಧತಿಯಡಿ ನೀಡಲಾಗುವ ಆಹಾರ ಧಾನ್ಯ ಹಂಚಿಕೆ ಸೇರಿದಂತೆ ಕೆಲವು ಸವಲತ್ತು ಮತ್ತು ಸೇವೆಗಳನ್ನು ಪಡೆದುಕೊಳ್ಳಲು ಆಧಾರ್ ಸಂಖ್ಯೆ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಅದರಂತೆ ಆಹಾರ ಇಲಾಖೆಯು ಕಳೆದ ಕೆಲ ದಿನಗಳ ಹಿಂದೆ ಹೊಸದೊಂದು ಆದೇಶ ಹೊರಡಿಸಿದ್ದು, ಪಡಿತರ ಚೀಟಿಯಲ್ಲಿರುವ ಕುಟುಂಬ ಸದಸ್ಯರ ಆಧಾರ್ ಕಾರ್ಡ್‌ನಲ್ಲಿರುವ 12 ಸಂಖ್ಯೆಯ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಪಂಚಾಯತ್ ಕಚೇರಿ, ಹೋಬಳಿ ಮಟ್ಟದಲ್ಲಿ ಅಟಲ್‌ಜಿ ಜನಸ್ನೇಹಿ ಕೇಂದ್ರಗಳು, ತಾಲೂಕು ಕೇಂದ್ರದ ನಗರ ಪ್ರದೇಶಗಳಲ್ಲಿ ಖಾಸಗಿ ಸೇವಾ ಕೇಂದ್ರಗಳು ಆಧಾರ್ ಸಂಖ್ಯೆಯ ಮಾಹಿತಿಯನ್ನು ಲಭ್ಯವಿರುವ ಆನ್‌ಲೈನ್ ತಂತ್ರಾಂಶದಲ್ಲಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಮಾಹಿತಿ ನೀಡಲು ಮೇ 15 ಅಂತಿಮ ದಿನವಾಗಿದೆ. ಶಿವಮೊಗ್ಗ ನಗರದಲ್ಲಿ ‘ಶಿವಮೊಗ್ಗ ಒನ್’ ಕೇಂದ್ರಗಳಲ್ಲಿ ಮಾಹಿತಿ ನೀಡಬೇಕಾಗಿದೆ. ಇದರಿಂದ ನಗರ ವ್ಯಾಪ್ತಿಯ ಪಡಿತರ ಚೀಟಿದಾರರು ಆಧಾರ್ ಮಾಹಿತಿ ನೀಡಲು ಶಿವಮೊಗ್ಗ ಒನ್ ನಾಗರಿಕ ಸೇವಾ ಕೇಂದ್ರಗಳಿಗೆ ಕೆಲ ದಿನಗಳಿಂದ ಮುಗಿಬೀಳುತ್ತಿದ್ದಾರೆ. ಇದರಿಂದ ಕೇಂದ್ರಗಳು ಪಡಿತರ ಚೀಟಿದಾರರಿಂದ ತುಂಬಿ ತುಳುಕುತ್ತಿವೆ. ಕಾಲಿಡಲು ಆಗದಷ್ಟು ಜನಸಂದಣಿ ಕಂಡುಬರುತ್ತಿದ್ದು, ಕೇಂದ್ರದ ಸಿಬ್ಬಂದಿ ಅಕ್ಷರಶಃ ಹೈರಾಣಾಗಿ ಹೋಗಿದ್ದಾರೆ. ಸಂಕಷ್ಟ: ಕಳೆದ ಕೆಲ ತಿಂಗಳುಗಳ ಹಿಂದೆ ಪಡಿತರ ಚೀಟಿಯಲ್ಲಿರುವ ಕುಟುಂಬ ಸದಸ್ಯರ ಎಪಿಕ್ ಕಾರ್ಡ್ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿತ್ತು. ಈ ವೇಳೆ ಸ್ವತಃ ಆಹಾರ ಇಲಾಖೆ ಸಚಿವ ದಿನೇಶ್ ಗುಂಡೂರಾವ್‌ರವರು ಆಧಾರ್ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಾಗರಿಕರು ಬರೀ ಎಪಿಕ್ ಮಾಹಿತಿ ಮಾತ್ರ ನೀಡಿದ್ದರು. ಇದೀಗ ಆಹಾರ ಇಲಾಖೆಯು ಹೊಸದೊಂದು ಆದೇಶ ಹೊರಡಿಸಿ, ಕೇಂದ್ರ ಸರಕಾರದ ಕಾಯ್ದೆಯಂತೆ ಆಧಾರ್ ಕಾರ್ಡ್ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಿದೆ. ಇದರಿಂದ ನಾಗರಿಕರು ‘ಶಿವಮೊಗ್ಗ ಒನ್’ ಕೇಂದ್ರಗಳಿಗೆ ಮತ್ತೆ ಆಗಮಿಸಿ ತಮ್ಮ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಮಾಹಿತಿ ನೀಡುವಂತಾಗಿದೆ. ವಿಸ್ತರಣೆ ಮಾಡಿ: ಮೊಬೈಲ್ ಮೂಲಕವು ಆಧಾರ್ ಕಾರ್ಡ್ ಮಾಹಿತಿ ನೀಡಬಹುದಾಗಿದೆ. ಆದರೆ ಈ ಬಗ್ಗೆ ಬಡ-ಅನಕ್ಷರಸ್ಥ ಪಡಿತರ ಚೀಟಿದಾರರಲ್ಲಿ ಸಮರ್ಪಕ ಮಾಹಿತಿಯಿಲ್ಲವಾಗಿದೆ. ತಮ್ಮ ಬಳಿ ಮೊಬೈಲ್ ಇದ್ದರೂ ಮಾಹಿತಿ ರವಾನಿಸಲು ಸಾಧ್ಯವಾಗದೆ ಸರಕಾರಿ ಕಚೇರಿ, ಸೇವಾ ಕೇಂದ್ರಗಳಿಗೆ ಎಡತಾಕುವಂತಾಗಿದೆ ಎಂದು ಪಡಿತರ ಚೀಟಿದಾರರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ವಾರ್ಡ್, ಗ್ರಾಮ ವ್ಯಾಪ್ತಿಯಲ್ಲಿ ಮೊಬೈಲ್ ಮೂಲಕ ಸಂದೇಶ ಕಳುಹಿಸುವ ಕೌಂಟರ್-ಮಾಹಿತಿ ಕೇಂದ್ರಗಳ ಸ್ಥಾಪನೆ ಮಾಡಬೇಕು. ಇದರಿಂದ ನಾಗರಿಕರು ಅತ್ಯಂತ ಸುಲಭವಾಗಿ ಮಾಹಿತಿ ರವಾನಿಸಲು ಸಾಧ್ಯವಾಗುತ್ತದೆ. ಹಾಗೆಯೇ ಪ್ರಸ್ತುತ ನಿಗದಿ ಮಾಡಿರುವ ಕಾಲಾವಧಿಯನ್ನು ವಿಸ್ತರಣೆ ಮಾಡಬೇಕು ಎಂಬುವುದು ನಾಗರಿಕರ ಒತ್ತಾಯವಾಗಿದೆ. ಸರಕಾರದ ನೀತಿ ಸರಿಯಿದೆ: ಇತ್ತೀಚೆಗೆ ಕೇಂದ್ರ ಸರಕಾರವು ಆಧಾರ್ ಕಾಯ್ದೆ 2016ನ್ನು ಜಾರಿಗೊಳಿಸಿದ್ದು, ಈ ಕಾಯ್ದೆಯ ಸೆಕ್ಷನ್ (7) ರನ್ವಯ ಸಾರ್ವಜನಿಕ ವಿತರಣಾ ಪದ್ಧತಿಯಡಿ ನೀಡಲಾಗುವ ಆಹಾರಧಾನ್ಯ ಹಂಚಿಕೆ ಸೇರಿದಂತೆ ಕೆಲವು ಸವಲತ್ತು ಮತ್ತು ಸೇವೆಗಳನ್ನು ಪಡೆದುಕೊಳ್ಳಲು ಆಧಾರ್ ಸಂಖ್ಯೆ ಅಗತ್ಯವಾಗಿದೆ. ಅದರಂತೆ ಆಹಾರ ಇಲಾಖೆಯು ಆಧಾರ್ ಮಾಹಿತಿ ನೀಡುವುದನ್ನು ಪಡಿತರ ಚೀಟಿದಾರರಿಗೆ ಕಡ್ಡಾಯಗೊಳಿಸಿದೆ.
<ಜಿ.ಎಂ.ಸುರೇಶ್‌ಬಾಬು, ಕಾಂಗ್ರೆಸ್ ಮುಖಂಡ