ಭೂ ಪರಿವರ್ತನೆ ಅರ್ಜಿ ಸಲ್ಲಿಕೆ ಸರಳೀಕರಣ: ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ
ಕಾರವಾರ, ಮೇ 3: ಜಿಲ್ಲೆಯಲ್ಲಿ ವಿವಿಧ ಉದ್ದೇಶಗಳಿಗೆ ಭೂಪರಿವರ್ತನೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ವಿಧಾನವನ್ನು ಸರಳೀಕರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಭೂಪರಿವರ್ತನೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಂಗ್ರಹಿಸುವುದು ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ಅತ್ಯಂತ ಅಗತ್ಯವಿರುವ ದಾಖಲೆಗಳನ್ನು ಮಾತ್ರ ಅರ್ಜಿದಾರರಿಂದ ಪಡೆದು ಉಳಿದಂತೆ ತಹಶೀಲ್ದಾರರು ತಮ್ಮ ಕಚೇರಿಯಲ್ಲಿಯೇ ದಾಖಲೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ನೀಡಬೇಕಾದ ದಾಖಲೆಗಳ ವಿವರ
ನಿಗದಿತ ನಮೂನೆ ಅರ್ಜಿ (ಅನುಬಂಧ-1), ಸನ್ 1973-74 ಮತ್ತು ಪ್ರಸ್ತುತ ಸಾಲಿನ ಪಹಣಿ ಪತ್ರಿಕೆ, ಪಹಣಿ ಪತ್ರಿಕೆಯಲ್ಲಿರುವ ಅರ್ಜಿದಾರರಿಗೆ ಸಂಬಂಧಿಸಿದ ಮ್ಯುಟೇಶನ್ ಎಂಟ್ರಿ, ಲೊಕೇಶನ್ ನಕ್ಷೆ, ಟೆನೆನ್ಸಿ ಅಲ್ಲದ ಮತ್ತು ಪಿಟಿಸಿಎಲ್ ಪ್ರಕರಣವಲ್ಲದ ಪ್ರಮಾಣ ಪತ್ರ, ಉಪನೋಂದಣಾಧಿಕಾರಿಗಳಿಂದ ಪಡೆದ ಕಳೆದ 13ವರ್ಷಗಳ ಋಣಭಾರರಾಹಿತ್ಯ ಪ್ರಮಾಣ ಪತ್ರ, ಸಂಬಂಧಪಟ್ಟ ಯೋಜನಾ ಪ್ರಾಧಿಕಾರದಿಂದ ಪಡೆದ ತಾತ್ಕಾಲಿಕ ವಿನ್ಯಾಸ ನಕ್ಷೆ, ಕೈಗಾರಿಕಾ ಉದ್ದೇಶಕ್ಕೆ ಪರಿವರ್ತನೆಯಾಗಿದ್ದಲ್ಲಿ ಕೈಗಾರಿಕಾ ಕೇಂದ್ರದವರಿಂದ ಪಡೆದ ಪ್ರಿಲಿಮಿನರಿ ರಿಜಿಸ್ಟ್ರೇಷನ್ ಪ್ರಮಾಣ ಪತ್ರ, ಕೈಗಾರಿಕೆ, ಹೊಟೇಲ್ ಮತ್ತು ರೆಸಾರ್ಟ್ ಉದ್ದೇಶವಾಗಿದ್ದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರಿಂದ ಪ್ರಮಾಣ ಪತ್ರ, ಭಾಗಶಃ ಕ್ಷೇತ್ರಕ್ಕೆ ಭೂಪರಿವರ್ತನೆ ಕುರಿತಲ್ಲಿ 11ಇ ನಕ್ಷೆ, ಪಹಣಿ ಪತ್ರಿಕೆಯ ಇತರ ಹಕ್ಕುಗಳ ಕಾಲಂನಲ್ಲಿ ಬ್ಯಾಂಕ್ ಬೋಜಾ ಅಥವಾ ಇತರ ಟಿಪ್ಪಣಿಗಳಿದ್ದಲ್ಲಿ ಅವುಗಳ ಬಗ್ಗೆ ಸಂಬಂಧಿಸಿದವರಿಂದ ಪಡೆದ ನಿರಪೇಕ್ಷಣಾ ಪತ್ರ, ಪಹಣಿ ಪತ್ರಿಕೆಯಲ್ಲಿ ಖರಾಬ ಕ್ಷೇತ್ರ ಇದ್ದಲ್ಲಿ ಮೋಜಣಿ ಇಲಾಖೆಯಿಂದ ಪಡೆದ ಆಕಾರ ಬಂಧ ಅಥವಾ ಖರಾಬ ಉತಾರು ಪತ್ರಿಕೆಯನ್ನು ಸಲ್ಲಿಸಬೇಕು.
*ಆವಶ್ಯಕತೆ ಇಲ್ಲ: ಅರ್ಜಿದಾರರು ರಸ್ತೆಯ ಬಗ್ಗೆ ಸ್ಥಳೀಯ ಸಂಸ್ಥೆಯಿಂದ ಪಡೆದ ದೃಢೀಕರಣ ಪತ್ರ, ಹಿಡುವಳಿ ಪ್ರಮಾಣ ಪತ್ರ, ಗ್ರಾಮ ಅಟ್ಲಾಸ್ ನಕ್ಷೆ ಮತ್ತು ಸಿಆರ್‌ಜೆಡ್ ಇಲಾಖೆಯಿಂದ ಪಡೆದ ನಿರಾಕ್ಷೇಪಣಾ ಪತ್ರ (ಸಿಆರ್‌ಜೆಡ್ ವ್ಯಾಪ್ತಿಗೆ ಒಳಪಡೆದ ಗ್ರಾಮಗಳಿಗೆ ಮಾತ್ರ) ದಾಖಲೆಗಳನ್ನು ಸಲ್ಲಿಸುವ ಆವಶ್ಯಕತೆ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.