ಯಶಸ್ವಿನಿ ಯೋಜನೆಯ ಸದಸ್ಯತ್ವ ಪಡೆದುಕೊಲ್ಲಿ : ಡಿಸಿ
ಮಡಿಕೇರಿ, ಮೇ 3: ಯಶಸ್ವಿನಿ ಆರೋಗ್ಯ ರಕ್ಷಣೆ ಯೋಜನೆಯಡಿ ಪ್ರಸಕ್ತ ಸಾಲಿಗೆ ಎಲ್ಲ ಸಹಕಾರಿ ಜನರು ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರು ಮನವಿ ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಯಶಸ್ವಿನಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಸಹಕಾರಿ ಸಂಘಗಳ ಸೌಲಭ್ಯಗಳು ಕಡುಬಡವರಿಗೂ ತಲುಪುವಂತಾಗಬೇಕು. ಆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತೆ ಸಲಹೆ ನೀಡಿದರು. ಸಹಕಾರಿ ಸಂಘಗಳ ಸೌಲಭ್ಯಗಳು ಕಡು ಬಡವರಿಗೆ, ಪರಿಶಿಷ್ಟರಿಗೆ ಮೂಲ ನಿವಾಸಿ ಗಿರಿಜನರಿಗೆ ತಲುಪುವಂತಾಗಬೇಕು. ಆದ್ದರಿಂದ ಇವರಿಗೆ ಯಶಸ್ವಿನಿ ಯೋಜನೆಯ ಸದಸ್ಯತ್ವ ಪಡೆಯಲು ಮಾಹಿತಿ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಸಹಕಾರಿ ಸಂಘಗಳ ಉಪ ನಿಬಂಧಕ ವಿಜಯಕುಮಾರ್ ಮಾತನಾಡಿ, ಪ್ರಸಕ್ತ ಸಾಲಿಗೆ ಯಶಸ್ವಿನಿ ನೋಂದಣಿಗೆ ಮೇ ತಿಂಗಳ ಅಂತ್ಯದವರೆಗೆ ಅವಕಾಶವಿದ್ದು, ಗ್ರಾಮೀಣ ಪ್ರದೇಶದ ಸದಸ್ಯರು 300 ರೂ. ಮತ್ತು ನಗರ ಪ್ರದೇಶದ ಸದಸ್ಯರು 710 ರೂ. ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 2015-16ನೆ ಸಾಲಿನಲ್ಲಿ ಸುಮಾರು 68 ಸಾವಿರ ಮಂದಿ ನೋಂದಣಿಯಾಗಿ ಸುಮಾರು 900 ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು 2.50 ಕೋಟಿ ರೂ. ಮೊತ್ತ ಯಶಸ್ವಿನಿ ಯೋಜನೆಗೆ ವೆಚ್ಚವಾಗಿದೆ. ಯಶಸ್ವಿನಿ ಯೋಜನೆಯು ಆಪತ್ಕಾಲದಲ್ಲಿ ಉಂಟಾಗುವ ಅನಾರೋಗ್ಯ ತೊಂದರೆಗಳಿಗೆ ಯಶಸ್ವಿನಿ ಯೋಜನೆ ಅನುಕೂಲವಾಗಲಿದೆ. ಆದ್ದರಿಂದ ಪ್ರತಿಯೊಬ್ಬ ಸಹಕಾರಿಗಳು ನೋಂದಣಿ ಮಾಡಿಸಿಕೊಳ್ಳುವಂತೆ ವಿಜಯಕುಮಾರ್ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ.ಆರ್.ಶ್ರೀರಂಗಪ್ಪ ಮಾತನಾಡಿ, ಗಿರಿಜನರಿಗೆ ಯಶಸ್ವಿನಿ ಯೋಜನೆಯಡಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸೌಲಭ್ಯಗಳಿದ್ದು, ಕಷ್ಟ ಬಂದ ಕಾಲದಲ್ಲಿ ಇದನ್ನು ಬಳಸಿಕೊಳ್ಳಲು ಅನುಕೂಲವಾಗಲಿದೆ. ಆದ್ದರಿಂದ ಗಿರಿಜನರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಅಗತ್ಯ ನೆರವು ನೀಡಬೇಕಿದೆ ಎಂದರು. ಐಟಿಡಿಪಿ ಇಲಾಖಾ ಅಧಿಕಾರಿ ಕೆ.ಎಚ್.ಸತೀಶ್ ಮಾತನಾಡಿ, ಹಾಡಿಗಳಲ್ಲಿ ಐಟಿಡಿಪಿ ಇಲಾಖೆ ಮೂಲಕ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಕೆ.ಬಿ.ಮುತ್ತಪ್ಪ ಮಾತನಾಡಿ, ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಚಿಕಿತ್ಸೆಗಾಗಿ ಬರುತ್ತಾರೆ. ಈ ಸಂದರ್ಭದಲ್ಲಿ ಯಶಸ್ವಿನಿ ಕಾರ್ಡ್‌ನ್ನು ತರುವಂತಾಗಬೇಕು ಎಂದು ಅವರು ಹೇಳಿದರು. ಯಶಸ್ವಿನಿ ಯೋಜನೆಯ ಸಮನ್ವಯಾಧಿಕಾರಿ ಚೇತನ್, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ವಿಕ್ರಂರಾಜೇ ಅರಸ್, ಸಹಕಾರಿ ಇಲಾಖೆಯ ವ್ಯವಸ್ಥಾಪಕ ಮೋಹನ್, ಯೋಗೇಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.