×
Ad

ಬಸವ ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ

Update: 2016-05-03 22:16 IST

ಮಡಿಕೇರಿ, ಮೇ 3: ಇದೇ ಮೇ 9ರಂದು ನಡೆಯುವ ಬಸವ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಡಳಿತದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬಸವ ಜಯಂತಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಮೆರವಣಿಗೆಯನ್ನು ನಗರದ ಇಂದಿರಾ ಗಾಂಧಿ ವೃತ್ತದಿಂದ ಆರಂಭಿಸಲು ನಿರ್ಧರಿಸಲಾಯಿತು. ಕಾಯಕಕ್ಕೆ ಹೆಚ್ಚು ಒತ್ತು ನೀಡಿದ ಬಸವಣ್ಣನವರ ತತ್ವಗಳು ಎಲ್ಲೆಡೆ ಪಸರಿಸುವಂತಾಗಬೇಕು. ಬಸವ ಜಯಂತಿ ದಿನದ ಮಹತ್ವವನ್ನು ತಿಳಿಯುವಂತಾಗಬೇಕು. ಬಸವಣ್ಣನವರ ವಿಚಾರಧಾರೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವಾಗಬೇಕಿದೆ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಕಿರಿಕೊಡ್ಲಿ ಮಠದ ಸದಾಶಿವ ಮಹಾಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಡಿ.ಬಿ.ಧರ್ಮಪ್ಪ, ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಬಿ.ಮಂಜುನಾಥ್, ಜಿಲ್ಲಾ ಸಮಿತಿ ಸದಸ್ಯರಾದ ಎಚ್.ಎಸ್.ಪ್ರೇಮನಾಥ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಮೂರ್ತಿ, ತಾಪಂ ಮಾಜಿ ಸದಸ್ಯ ಪಿ.ಕೆ.ಪಾಂಡುರಂಗ, ಮಡಿಕೇರಿ ತಾಲೂಕು ವೀರಶೈವ ಮಹಾಸಭಾದ ಪ್ರದೀಪ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿಕ್ಕಯ್ಯ, ಮಣಜೂರು ಮಂಜುನಾಥ್ ಮತ್ತಿತರರು ಕಾರ್ಯಕ್ರಮದ ಕುರಿತು ಹಲವು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News