×
Ad

ಪುರಾತನ ಧಾರ್ಮಿಕ ಆಚರಣೆ

Update: 2016-05-03 22:18 IST

 ವೀರಾಜಪೇಟೆ, ಮೇ 3: ದೇವಾಲಯಗಳು, ಸಂಘ ಸಂಸ್ಥೆಗಳು ಸಾಂಪ್ರದಾಯಿಕವಾಗಿ ಆಚರಿಸುವ ಪದ್ಧತಿಗಳನ್ನು ಯಥಾ ಸ್ಥಿತಿಯಲ್ಲಿರಿಸುವಂತೆ ವೀರಾಜಪೇಟೆ ಸಿವಿಲ್ ಜಡ್ಜ್ ನ್ಯಾಯಾಲಯ ಆದೇಶಿಸಿದೆ.

 ವಿಶ್ವ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ತಂಡ ಜಿಲ್ಲೆಯ ವಿವಿಧೆಡೆಗಳಲ್ಲಿ ಹಬ್ಬ ಹರಿದಿನಗಳಲ್ಲಿ ನಡೆಯುವ ಪ್ರಾಣಿ ಬಲಿಯನ್ನು ತಡೆಯುತ್ತಿರುವ ಹಿನ್ನೆಲೆಯಲ್ಲಿ ವೀರಾಜಪೇಟೆ ತೆಲುಗರ ಬೀದಿಯಲ್ಲಿರುವ ಮಾರಿಯಮ್ಮ ಹಾಗೂ ಅಂಗಾಳ ಪರಮೇಶ್ವರಿ ದೇವಾಲಯಗಳಲ್ಲಿ ನಡೆಯುವ ಶತಮಾನಗಳ ಧಾರ್ಮಿಕ ಪದ್ಧತಿಗೆ ತಡೆವೊಡ್ಡದಂತೆ ಅಧಿಕಾರಿಗಳಿಗೆ ಆದೇಶಿಸಬೇಕೆಂದು ವೀರಾಜಪೇಟೆ ಸಮುಚ್ಚಯ ನ್ಯಾಯಾಲಯದಲ್ಲಿರುವ ಸಿವಿಲ್ ಜಡ್ಜ್ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿತ್ತು.

ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಪ್ರಾಣಿವಧೆ ನಿಷೇಧದ ವಿರುದ್ಧ ‘ವರ್ಕೀ ದಿ ಯೂನಿಯನ್ ಆಫ್ ಇಂಡಿಯಾ ಕಂಪೆನಿ’ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಧಾರ್ಮಿಕ ಆಚರಣೆಗೆ ಧಕ್ಕೆ ತರದ ರೀತಿಯಲ್ಲಿ ಆಯಾಯ ಧರ್ಮಕ್ಕೆ ಸೀಮಿತವಾಗಿ ಹಿಂದಿನ ಧಾರ್ಮಿಕ ಆಚರಣೆಯನ್ನು ಯಥಾ ಸ್ಥಿತಿಯಲ್ಲಿ ಆಚರಿಸುವಂತೆ ಜೂನ್ 15, 2016ರ ತನಕ ಗಡುವು ನೀಡಿ ಆದೇಶ ನೀಡಿರುವುದನ್ನು ಅರ್ಜಿದಾರರು ಆಧಾರ ಸಮೇತ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ವಿವಿಧ ಧರ್ಮ ಜಾತಿಗಳ ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ಪುರಾತನ ಪದ್ಧತಿಗಳನ್ನು ಮುಂದುವರಿಸಬಹುದು. ಇದರಲ್ಲಿ ಪ್ರಾಣಿ ಬಲಿಯು ಸೇರಿದೆ. ಇದಕ್ಕೆ ಸಂಘಟನೆಗಳು, ಅಧಿಕಾರಿ ವರ್ಗ ಇತರ ಯಾವುದೇ ಪ್ರತಿನಿಧಿಗಳು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ವೀರಾಜಪೇಟೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.

ಮಾರಿಯಮ್ಮ ದೇವಾಲಯದ ಟ್ರಸ್ಟ್‌ನ ಅರ್ಜಿ ಇತರ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಿದ ನ್ಯಾಯಾಲಯ ಪುರಾತನ ಧಾರ್ಮಿಕ ಆಚರಣೆ ಸಂದರ್ಭ ಹಿಂದಿನಂತೆ ಯಥಾ ಸ್ಥಿತಿಯನ್ನು ಕಾಪಾಡುವಂತೆ ಆದೇಶ ನೀಡಲಾಗಿದ್ದು ಈ ಸಂಬಂಧದಲ್ಲಿ ಮಧ್ಯ ಪ್ರವೇಶಿಸದಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಕೊಡಗು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಉನ್ನತಾಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಅರ್ಜಿದಾರರ ಪರ ವಕೀಲ ಕೊಕ್ಕಂಡ ಜಿ. ಅಪ್ಪಣ್ಣ ವಕಾಲತ್ತು ವಹಿಸಿದ್ದರು. ಮಾರಿಯಮ್ಮ ದೇವಾಲಯದ ಟ್ರಸ್ಟ್ ಪರ ವಕೀಲ ಟಿ.ಪಿ.ಕೃಷ್ಣ ದೇವಾಲಯಗಳಲ್ಲಿ ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಪ್ರಾಣಿ ವಧೆ ತಡೆಯದಂತೆ ಆದೇಶಿಸಬೇಕು ಎಂದು ನ್ಯಾಯಾಲಯಕ್ಕೆ ಎ.29ರಂದು ರಿಟ್ ಅರ್ಜಿ ಸಲ್ಲಿಸಿದ್ದರು.

ವೀರಾಜಪೇಟೆ ತೆಲುಗರಬೀದಿಯ ಮಾರಿಯಮ್ಮ ದೇವಾಲಯ ಟ್ರಸ್ಟ್ ಹಾಗೂ ಅಂಗಾಳಪರಮೇಶ್ವರಿ ದೇವಾಲಯದಲ್ಲಿ ಮೇ 3ರಿಂದ ಮಾರಿಯಮ್ಮ ದೇವಿಯ ಉತ್ಸವ ಆರಂಭವಾಗಿದ್ದು ಮೇ 7ರವರಗೆ ನಡೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News