×
Ad

ವಿನೋಬನಗರದಲ್ಲಿ ದಿಢೀರ್ ಪ್ರತಿಭಟನೆ

Update: 2016-05-03 22:19 IST

ಶಿವಮೊಗ್ಗ, ಮೇ 3: ಲೋಕೋಪಯೋಗಿ ಇಲಾಖೆಯ ವತಿಯಿಂದ ನಡೆಸಲಾಗುತ್ತಿರುವ ರಸ್ತೆ ಕಾಮಗಾರಿ ಅವೈಜ್ಞಾನಿಕ ವಾಗಿದ್ದು, ಕಳಪೆಯಿಂದ ಕೂಡಿದೆ ಎಂದು ಆರೋಪಿಸಿ ಮಂಗಳ ವಾರ ಬೆಳಗ್ಗೆ ನಗರದ ವಿನೋಬನಗರದ 100 ಅಡಿ ರಸ್ತೆಯಲ್ಲಿ ಕಾರ್ಪೋರೇಟರ್ ಎಚ್.ಸಿ.ಮಾಲತೇಶ್ ನೇತೃತ್ವ ದಲ್ಲಿ ಸ್ಥಳೀಯ ನಿವಾಸಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಉಷಾ ನರ್ಸಿಂಗ್ ಹೋಂ ನಿಂದ ಆಲ್ಕೊಳದವರೆಗಿನ 100 ಅಡಿ ರಸ್ತೆಯ ಡಾಂಬರೀಕರಣ ಕಾಮಗಾರಿಯನ್ನು ಇತ್ತೀಚೆಗೆ ನಡೆಸಲಾಗುತ್ತಿದೆ. ಆದರೆ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದ್ದು, ಯಾವುದೇ ವೈಜ್ಞಾನಿಕ ಮಾನದಂಡಗಳ ಅನುಸರಣೆ ಮಾಡುತ್ತಿಲ್ಲ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಇತ್ತೀಚೆಗೆ ಈ ರಸ್ತೆಯಲ್ಲಿ ಶಶಿಕುಮಾರ್ ಎಂಬ ಕಾರ್ಮಿಕ ನೊಬ್ಬನಿಗೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದಿದ್ದು, ಆತ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಜೀವಕ್ಕಾಗಿ ಹೋರಾಟ ನಡೆಸುತ್ತಿದ್ದಾನೆ. ಅಪಘಾತಕ್ಕೆ ಪಿಡಬ್ಲ್ಯೂಡಿ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ. ಯಾವುದೇ ಮುಂಜಾಗ್ರತಾ ಕ್ರಮ ಅನುಸರಿಸದೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಸುಮಾರು 40 ಕ್ಕೂ ಹೆಚ್ಚು ಸಿಟಿ ಬಸ್‌ಗಳು, ಶಿಕಾರಿಪುರ, ಹೊನ್ನಾಳಿ ಮಾರ್ಗದ ಖಾಸಗಿ ಬಸ್‌ಗಳು ಈ ರಸ್ತೆಯಾಗಿ ಓಡಾಟ ನಡೆಸುತ್ತಿವೆ. ದಿನಕ್ಕೆ ನೂರಾರು ಬಸ್‌ಗಳು ಈ ರಸ್ತೆಯ ಮೂಲಕ ಓಡಾಡುವುದರಿಂದ ಸಂಚಾರ ದಟ್ಟಣೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕನಿಷ್ಠ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈ ಬಗ್ಗೆ ಪಿಡಬ್ಲ್ಯೂಡಿ ಅಧಿಕಾರಿಗಳನ್ನು ವಿಚಾರಿಸಿದರೆ ನಿರ್ಲಕ್ಷ್ಯದ ಉತ್ತರ ನೀಡುತ್ತಾರೆ. ಅಪಘಾತಕ್ಕೆ ಈಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕನನ್ನು ಭೇಟಿಯಾಗಿ ವಿಚಾರಿಸಲು ಗುತ್ತಿಗೆದಾರರಾಗಲೀ, ಅಧಿಕಾರಿಗಳಾಗಲೀ ಬಂದಿಲ್ಲ. ತಕ್ಷಣವೇ ಆತನ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಲೋಕೋಪಯೋಗಿ ಇಲಾಖೆ ಭರಿಸಬೇಕು. ವೈಜ್ಞಾನಿಕವಾಗಿ ಡಾಂಬರೀಕರಣ ಕಾಮಗಾರಿ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News