×
Ad

ಶಾಂತೆಯಂಡ ಕಪ್ ಹಾಕಿ ಉತ್ಸವ: ಅಂಚೆ ಲಕೋಟೆ ಬಿಡುಗಡೆ

Update: 2016-05-03 22:22 IST

ಮಡಿಕೇರಿ, ಮೇ 3: ಕೊಡವ ಕುಟುಂಬಗಳ ನಡುವಿನ ಶಾಂತೆಯಂಡ ಕಪ್ ಹಾಕಿ ಉತ್ಸವದ ಸ್ಮರಣಾರ್ಥ ಜಿಲ್ಲಾ ಅಂಚೆ ಇಲಾಖೆಯ ಮೂಲಕ ಹೊರ ತರಲಾಗಿರುವ ವಿಶೇಷ ಅಂಚೆ ಲಕೋಟೆ ಯನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು.

ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೆೇಜು ಮೈದಾನದ ಹಾಕಿ ಉತ್ಸವದ ವೇದಿಕೆಯಲ್ಲಿ ಶಾಂತೆಯಂಡ ಒಕ್ಕಡ ಹಾಕಿ ನಮ್ಮೆ ಎನ್ನುವ ಚಿನ್ಹೆಯನ್ನು ಒಳಗೊಂಡ ಆಕರ್ಷಕ ಅಂಚೆ ಲಕೋಟೆಯನ್ನು ಮಡಿಕೇರಿ ಅಂಚೆ ಕಛೇರಿಯ ಅಂಚೆ ಅಧೀಕ್ಷಕ ಎಚ್.ಎಲ್. ನಾಗರಾಜ್ ಬಿಡುಗಡೆ ಮಾಡಿದರು.

ಈ ಸಂದರ್ಭ ಮಾತನಾಡಿದ ಅವರು, ಕೊಡವ ಕುಟುಂಬಗಳ ಹಾಕಿ ಉತ್ಸವದಲ್ಲಿ ಕ್ರೀಡೆಯೊಂದಿಗೆ ಕೊಡವ ಸಮುದಾಯದ ವಿಶಿಷ್ಟ ಸಂಸ್ಕೃತಿ ಪರಂಪರೆಗಳನ್ನು ಹೊರ ಭಾಗಗಳಿಗೂ ಪರಿಚಯಿಸುವ ಪ್ರಯತ್ನ ನಡೆಯುತ್ತಿರುವುದು ಶ್ಲಾಘನೀಯ ಎಂದರು. ಇಂತಹ ಹಾಕಿ ಉತ್ಸವದ ಸ್ಮರಣಾರ್ಥ ಅಂಚೆ ಲಕೋಟೆಯನ್ನು ಹೊರ ತರುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಸಿಡಿ ಬಿಡುಗಡೆ

ಬೆಂಗಳೂರು ಪೀನ್ಯದ ರೈಸಿಂಗ್ ಕೊಡವ ಸಂಸ್ಥೆ ಹೊರ ತಂದಿರುವ 9 ಕೊಡವ ಹಾಡುಗಳನ್ನು ಒಳಗೊಂಡ ಸಿಡಿಯನ್ನು ಬ್ರಹ್ಮಗಿರಿ ಕೊಡವ ವಾರಪತ್ರಿಕೆಯ ಸಂಪಾದಕ ಯು.ಎಂ. ಪೂವಯ್ಯ ಇದೇ ಸಂದರ್ಭ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ಕೊಡವ ಭಾಷಾ ಸಂಸ್ಕೃತಿಯ ಬೆಳವಣಿಗೆಗೆ ಕೊಡವ ಹಾಡುಗಳು ಪೂರಕವಾಗಿದ್ದು, ಇಂಥ ಪ್ರಯತ್ನಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ವೇದಿಕೆಯಲ್ಲಿ ಶಾಂತೆಯಂಡ ಕಪ್ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಕಾರ್ಯಾಧ್ಯಕ್ಷ ವೀಣಾ ಅಚ್ಚಯ್ಯ, ಪಟ್ಟು ಬೋಪಯ್ಯ, ನೆದರ್ಲ್ಯಾಂಡ್‌ನ ಅಂತಾರಾಷ್ಟ್ರೀಯ ಹಾಕಿ ಆಟಗಾರರಾದ ರೋವ್ ಕ್ಯಾನಿಸ್, ಎರಿಕ್ ಜೆಜಾಜ್, ಮಾರ್ಟಿನ್ ವ್ಯಾನ್, ಭಾರತದ ಅಂತಾರಾಷ್ಟ್ರೀಯ ಹಾಕಿ ಪಟು ವಿ.ಎಸ್.ವಿನಯ್, ಮಡಿಕೇರಿಯ ಉಪ ಅಂಚೆ ಅಧೀಕ್ಷಕ ಪಿ. ದಿನೇಶ್, ಅಂಚೆ ಪಾಲಕ ಬಿ.ಜಿ. ಉಮೇಶ್, ಅಂಚೆ ನಿರೀಕ್ಷಕ ಎಚ್.ಎನ್. ದೀಪಕ್, ಸವಿತಾ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News