ನೀರಿನ ಸಮಸ್ಯೆ: ಅಧಿಕಾರಿಗಳಿಂದ ಮಾಹಿತಿ ಪಡೆದ ಡಿಸಿ
ಮಡಿಕೇರಿ, ಮೇ 3 : ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ನಿವಾರಿಸುವ ಸಂಬಂಧ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಅಧಿಕಾರಿಗಳಿಂದ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರು ಮಾಹಿತಿ ಪಡೆದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕುಡಿಯುವ ನೀರು ಸಮಸ್ಯೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರು ಇರುವ ಬೋರ್‌ವೆಲ್‌ಗಳನ್ನು ಸುಧಾರಣೆ ಮಾಡಲು ಹೆಚ್ಚಿನ ಒತ್ತು ನೀಡಬೇಕು. ಅನಿವಾರ್ಯವಾಗಿದ್ದಲ್ಲಿ ಮಾತ್ರ ಹೊಸ ಬೋರ್‌ವೆಲ್ ಕೊರೆಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸ್ಪಷ್ಟ ನಿರ್ದೇಶನ ನೀಡಿದರು. ಕುಡಿಯುವ ನೀರಿನ ಸಮಸ್ಯೆಯನ್ನು ಬಹಳಷ್ಟು ಕಡೆ ನಾವುಗಳೇ ಪರಿಹರಿಸ ಬಹುದು. ಆ ನಿಟ್ಟಿನಲ್ಲಿ ಮನಸ್ಸು ಮಾಡಬೇಕು. ಕೆಲವು ಗ್ರಾಮಗಳಲ್ಲಿ ಇರುವ ಬೋರ್‌ವೆಲ್‌ಗಳನ್ನು ಶುದ್ಧೀಕರಿಸುವುದು, ಜೊತೆಗೆ ಕುಡಿಯಲು ನೀರು ಶುದ್ಧವಾಗಿದೆಯೇ ಎಂದು ಪರಿಶೀಲಿಸಬೇಕು ಎಂದು ಅವರು ಸಲಹೆ ನೀಡಿದರು. ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಇರುವ ಬಗ್ಗೆ ದೂರವಾಣಿ ಮೂಲಕ ಮಾಹಿತಿ ತಿಳಿಸಬಹುದಾಗಿದ್ದು, ಆ ನಿಟ್ಟಿನಲ್ಲಿ ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದರ
ು. ಪ್ರತೀ ತಾಲೂಕು ವ್ಯಾಪ್ತಿಯಲ್ಲಿ ಎಷ್ಟು ನಳ್ಳಿ ನೀರು ಸರಬರಾಜು ಯೋಜನೆ, ಕಿರುನೀರು ಸರಬರಾಜು ಯೋಜನೆ, ಕೊಳವೆ ಬಾವಿಗಳು ಮತ್ತು ತೆರೆದ ಬಾವಿ ಸಂಬಂಧ ನಿಖರ ಮಾಹಿತಿ ಇರಬೇಕು. ಕಾರ್ಯ ನಿರ್ವಾಹಕ ಅಧಿಕಾರಿ, ಕಾರ್ಯಪಾಲಕ ಇಂಜಿನಿಯರ್ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ, ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿದರು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು, ನೋಲ್ ಅಧಿಕಾರಿಗಳು ಮತ್ತು ಸಹಾಯಕ/ಕಿರಿಯ ಇಂಜಿನಿಯರ್‌ಗಳು ಪ್ರತಿದಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆಗೆ ತೆರಳಿ ವಸ್ತುಸ್ಥಿತಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು ಎಂದರು. ಪ್ರತಿದಿನದ ಮಾಹಿತಿಗಳನ್ನು ಬೆಳಗ್ಗೆ ಮತ್ತು ಸಂಜೆ ಕಾರ್ಯನಿರ್ವಹಣಾಧಿಕಾರಿ ತಾಲೂಕು ಪಂಚಾಯತ್ ಕಚೇರಿಗೆ ಸಲ್ಲಿಸತಕ್ಕದ್ದು. ಕಾರ್ಯನಿರ್ವಹಣಾಧಿಕಾರಿಗಳು ನಮೂನೆಗಳಲ್ಲಿ ಪಂಚಾಯತ್‌ವಾರು ಕ್ರೋಡೀಕರಿಸಿ ಗಣಕೀಕರಣಗೊಳಿಸಿ ಸಂಬಂಧಿಸಿದ ತಾಲೂಕಿನ ತಹಶೀಲ್ದಾರರ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ಗಣಕೀಕರಣಗೊಳಿಸಿ ಸಂಬಂಧಿಸಿದ ತಾಲೂಕಿನ ತಹಶೀಲ್ದಾರರ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ಕ್ರೋಡೀಕೃತ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳು, ತಾ.ಪಂ. ಇಒಗಳು, ಜಿ.ಪಂ. ಇಇ, ಎಇಇ ಹಾಗೂ ನೋಡಲ್ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಸಂಬಂಧ ಹಲವು ಮಾಹಿತಿ ನೀಡಿದರು. ಸಭೆಯಲ್ಲಿ ಎಲ್ಲಾ ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳು, ತಾ.ಪಂ. ಇಓಗಳು, ಜಿ.ಪಂ. ಇಇ, ಎಇಇ ಹಾಗೂ ನೋಡಲ್ ಅಧಿಕಾರಿಗಳು ಹಾಜರಿದ್ದರು.
ಬರ ಪರಿಹಾರದ ವರದಿ ನಿರ್ಲಕ್ಷಿಸಿದರೆ ಶಿಸ್ತು ಕ್ರಮ
ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾ ನೋಡಲ್ ಅಧಿಕಾರಿ, ಬರ ಪರಿಹಾರದ ವರದಿ ಪರಿಶೀಲಿಸಿ ತಮ್ಮ ಅಭಿಪ್ರಾಯದೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತಪ್ಪದೇ ಸಲ್ಲಿಸತಕ್ಕದ್ದು, ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಲ್ಲಿ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿ ವಿರುದ್ಧ ಕರ್ತವ್ಯ ನಿರ್ವಹಿಸಲು ನಿರ್ಲಕ್ಷ್ಯತೆ ತೋರಿದ ಬಗ್ಗೆ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಕಾಯಿದೆ 2005ರ ನಿಯಮ 56 ರ ಪ್ರಕಾರ ಕರ್ತವ್ಯ ಲೋಪ ಎಸಗಿರುವುದಕ್ಕಾಗಿ ದತ್ತವಾಗಿರುವ ಅಧಿಕಾರದಂತೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.