ಚಾರ್ಮಾಡಿ ಘಾಟ್‌ನಲ್ಲಿ ಪ್ರಪಾತಕ್ಕೆ ಬಿದ್ದಿದ್ದ ಮಹಿಳೆಯ ರಕ್ಷಣೆ
Update: 2016-05-03 22:33 IST
ಮೂಡಿಗೆರೆ, ಮೇ3: ಬಣಕಲ್ ಬಳಿಯ ಚಾರ್ಮಾಡಿ ಘಾಟ್‌ನಲ್ಲಿ ಪ್ರಪಾತಕ್ಕೆ ಬಿದ್ದಿದ್ದ ಮಹಿಳೆಯೊಬ್ಬರನ್ನು ಅಗ್ನಿಶಾಮಕ, ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಿಸಿ ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅರಣ್ಯ ರಕ್ಷಕ ಪರಮೇಶ್ವರ್ ಹಗಲು ಗಸ್ತಿನಲ್ಲಿದಾಗ ಪ್ರಪಾತದಲ್ಲಿ ಬಿದ್ದು ಗಾಯಗೊಂಡಿದ್ದ ಮಹಿಳೆಯನ್ನು ಕಂಡಿದ್ದು, ಕೂಡಲೇ ಬಣಕಲ್ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಬಣಕಲ್ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಮೇಲೆತ್ತಿ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಿಳೆಯನ್ನು ಆಲ್ದೂರು ಠಾಣಾ ವ್ಯಾಪ್ತಿಯ ತೋರಣಮಾವಿನ ದಾಕ್ಷಾಯಣಿ (45) ಎಂದು ಗುರುತಿಸಲಾಗಿದೆ. ಆದರೆ ಮಹಿಳೆಯು ಅರೆಪ್ರಜ್ಞಾವಸ್ಥೆಯಲ್ಲಿದ್ದು ಪ್ರಜ್ಞೆ ಬಂದ ನಂತರ ಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಬಣಕಲ್ ಪಿಎಸ್ಸೈ ರಘು ತಿಳಿಸಿದ್ದಾರೆ. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.