ಮಾಜಿ ಸಚಿವೆ ಚಂದ್ರಪ್ರಭಾ ಅರಸ್ ನಿಧನ
ಇಂದು ಕಲ್ಲಹಳ್ಳಿಯಲ್ಲಿ ಅಂತ್ಯಕ್ರಿಯೆ
ಮೈಸೂರು, ಮೇ 3: ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸ್ ಅವರ ಪುತ್ರಿ, ಮಾಜಿ ಸಂಸದೆ, ಮಾಜಿ ಸಚಿವೆ ಚಂದ್ರಪ್ರಭಾ ಅರಸ್ ಇಂದು ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು. ಇವರಿಗೆ 67 ವರ್ಷ ವಯಸ್ಸಾಗಿತ್ತು.
ಕಳೆದ 10 ವರ್ಷಗಳಿಂದ ತೀವ್ರ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದ ಚಂದ್ರಪ್ರಭಾ ಅರಸ್, ಮಂಗಳವಾರ ಸಂಜೆ 5:50ರಲ್ಲಿ ಅಪೋಲೊ ಬಿಜಿಎಸ್ ಆಸ್ಪತ್ರೆ ಯಲ್ಲಿ ಕೊನೆಯುಸಿರೆಳೆದರು. ಮೃತರು ಪುತ್ರ ಮಂಜುನಾಥ್, ಪುತ್ರಿ ಅನುಪಮಾ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
1983 ಮತ್ತು 1989ರಲ್ಲಿ ಹುಣಸೂರು ತಾಲೂಕಿನಿಂದ ಶಾಸಕಿಯಾಗಿ ಆಯ್ಕೆಯಾಗಿದ್ದ ಚಂದ್ರಪ್ರಭಾ ಅರಸ್ ಅವರು, 1991ರಲ್ಲಿ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಪರಾಭವಗೊಳಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಅನಂತರದ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಚಂದ್ರಪ್ರಭಾ ಅರಸ್ ರಾಜಕೀಯವಾಗಿ ನೇಪಥ್ಯಕ್ಕೆ ಸರಿದರು.
ಚಂದ್ರಪ್ರಭಾ ಅರಸ್ ಅವರ ಮೃತ ದೇಹವನ್ನು ಬುಧವಾರ ಬೆಳಗ್ಗೆ 8ರಿಂದ 9ರವರೆಗೆ ನಗರದ ಲಕ್ಮೀಪುರಂ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಅನಂತರ ಹುಣಸೂರಿಗೆ ಪಾರ್ಥಿವ ಶರೀರವನ್ನು ತಂದು ಅಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.
ಚಂದ್ರಪ್ರಭಾ ಅವರ ಕೊನೆಯ ಇಚ್ಛೆಯಂತೆಯೇ ಅವರ ಅಂತ್ಯಸಂಸ್ಕಾರವನ್ನು ಹುಣಸೂರಿನ ಕಲ್ಲಹಳ್ಳಿಯಲ್ಲಿ ಇವರ ತಂದೆ ಡಿ.ದೇವರಾಜ ಅರಸ್ ಸಮಾಧಿಯ ಪಕ್ಕದಲ್ಲೇ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ಹುಣಸೂರಿನ ಶಾಸಕ ಎಚ್.ಪಿ.ಮಂಜುನಾಥ್ ಸೇರಿದಂತೆ ಎಲ್ಲ ಪಕ್ಷದ ಹಿರಿಯ ಮುಖಂಡರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂತಾಪ: ಚಂದ್ರಪ್ರಭಾ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಎಚ್.ವಿಶ್ವನಾಥ್, ಶಾಸಕರಾದ ವಾಸು, ಜಿ.ಟಿ.ದೇವೇಗೌಡ, ಎಂ.ಕೆ.ಸೋಮಶೇಖರ್, ತನ್ವೀರ್ ಸೇಠ್, ಮೇಯರ್ ಬಿ.ಎಲ್.ಭೈರಪ್ಪ, ಜಿಲ್ಲಾಧಿಕಾರಿ ಸಿ.ಶಿಖಾ ಮತ್ತಿತರ ಗಣ್ಯರು ಕಂಬನಿ ಮಿಡಿದಿದ್ದಾರೆ.