ಪರಮೇಶ್ವರ್ ವಿರುದ್ಧ ರಿಟ್ ಅರ್ಜಿ ಸಲ್ಲಿಕೆ

Update: 2016-05-03 17:46 GMT

ಬೆಂಗಳೂರು, ಮೇ 3: ಗೃಹ ಸಚಿವಪರಮೇಶ್ವರ್ ಅವರನ್ನು ವಿಧಾನ ಪರಿಷತ್ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧ ಆರ್‌ಟಿಐ ಹಾಗೂ ಸಾಮಾಜಿಕ ಕಾರ್ಯ ಕರ್ತ ಶಶಿಧರ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆ ಸಿದ ನ್ಯಾಯಮೂರ್ತಿ ರವಿ ಮಳೀಮಠ ಅವರಿದ್ದ ರಜಾ ಕಾಲದ ನ್ಯಾಯಪೀಠ ವಿಚಾರಣೆಯನ್ನು ಜೂನ್ ತಿಂಗಳಿಗೆ ಮುಂದೂಡಿತು.
ಮಂಗಳವಾರ ಪರಮೇಶ್ವರ್ ವಿರುದ್ಧ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಇದನ್ನು ತುರ್ತು ವಿಚಾರಣೆ ನಡೆಸಬೇಕಾದ ಅಗತ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಜೂನ್‌ಗೆ ವಿಚಾರಣೆಯನ್ನು ಮುಂದೂಡಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಡೀಮ್ಡ್ ವಿಶ್ವವಿದ್ಯಾನಿಲಯವಾದ ಸಿದ್ಧಾರ್ಥ ಅಕಾಡಮಿ ಆಫ್ ಹೈಯರ್ ಎಜುಕೇಷನ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿಯ ಮುಖ್ಯಸ್ಥರಾಗಿದ್ದಾರೆ. ಜೊತೆಗೆ, ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. 2014ರ ಜೂನ್ 20ರಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶಿತರಾಗಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ವೃತ್ತಿ ಹಾಗೂ ಉದ್ಯೋಗ ಕಾಲಂನಲ್ಲಿ ಎಲ್‌ಐಸಿ ಏಜೆಂಟ್, ರೈತ, ಕನ್ಸಲ್ಟೆಂಟ್ ಮತ್ತು ಶಿಕ್ಷಣ ತಜ್ಞ ಎಂದು ಘೋಷಿಸಿಕೊಂಡಿದ್ದಾರೆ. 2015ರ ಅ.30ರಂದು ರಾಜ್ಯ ಗೃಹ ಸಚಿವರಾಗಿ ನೇಮಕಗೊಂಡಿದ್ದರು. ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡ ದಾಖಲೆಗಳ ಪ್ರಕಾರ ಎಲ್‌ಐಸಿ ಏಜೆಂಟ್, ರೈತ, ಕನ್ಸಲ್ಟೆಂಟ್ ಮತ್ತು ಶಿಕ್ಷಣ ತಜ್ಞರಾಗಿ ಹಲವು ಲಾಭದಾಯಕ ಹುದ್ದೆಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಅವರನ್ನು ಸಂವಿಧಾನದ ಪರಿಚ್ಛೇದ 191(1)(ಎ) ಅನ್ವಯ ವಿಧಾನಪರಿಷತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸುವಂತೆ ಕೋರಿ 2016ರ ಜ.20ರಂದು ರಾಜ್ಯಪಾಲರಿಗೆ ಕೋರಿ ಮನವಿ ಪತ್ರ ಬರೆಯಲಾಗಿತ್ತು. ಆದರೆ, ಮನವಿಗೆ ರಾಜ್ಯಪಾಲರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ 2016ರ ಮಾರ್ಚ್ 22ರಂದು ಮತ್ತೆ ಮನವಿ ಮಾಡಲಾಗಿತ್ತು. ಆದರೆ, ಈವರೆಗೂ ರಾಜ್ಯಪಾಲರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
       ಗೃಹ ಸಚಿವರಾಗಿ ಆಯ್ಕೆಯಾದ ನಂತರವೂ ಪರಮೇಶ್ವರ್‌ರವರು ಸಿದ್ಧಾರ್ಥ ಅಕಾಡಮಿ ಆಫ್ ಹೈಯರ್ ಎಜುಕೇಷನ್ ಸಂಸ್ಥೆ ಆಡಳಿತ ಮಂಡಳಿ ಮುಖ್ಯಸ್ಥ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಈ ಸಂಸ್ಥೆಯು ರಾಜ್ಯ ಸರಕಾರ ಮತ್ತು ಯುಜಿಸಿಯಿಂದ ಲಾಭವನ್ನು ಪಡೆದಿದೆ. ಸರಕಾರಿ ಸೇವಕರು ಏಕ ಕಾಲದಲ್ಲಿ ಲಾಭದಾಯಕ ಹುದ್ದೆ ಹೊಂದುವಂತಿಲ್ಲ ಎಂಬ ನಿಯಮವಿದೆ. ಹೀಗಾಗಿ, ಪರಮೇಶ್ವರ್ ಅವರು ಏಕಕಾಲದಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹುದ್ದೆಯನ್ನು ಹೊಂದಿದ್ದಾರೆ. ಇದು ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಸೆಕ್ಷನ್ 2(12ರ) ಸ್ಪಷ್ಟ ಉಲ್ಲಂಘನೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಅಲ್ಲದೆ, ವಿಧಾನಪರಿಷತ್ ಸದಸ್ಯ ಸ್ಥಾನದಿಂದ ಡಾ.ಜಿ.ಪರಮೇಶ್ವರ್ ಅವರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ರಾಜ್ಯಪಾಲರಿಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಲಾಗಿದೆ. ಹಾಗೆಯೇ, ಅರ್ಜಿ ಇತ್ಯರ್ಥವಾಗುವವರೆಗೆ ಡಾ.ಪರಮೇಶ್ವರ್ ಅವರಿಗೆ ಸಂಪುಟ ದರ್ಜೆಯ ಸದಸ್ಯರಿಗೆ ನೀಡುವ ಸೌಲಭ್ಯಗಳನ್ನು ತಡೆಹಿಡಿಯಬೇಕು ಎಂದು ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಮಧ್ಯಾಂತರ ಮನವಿ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News