ಗಡಬನಹಳ್ಳಿ ಕಾಲನಿಯ ದಲಿತ ಮಹಿಳೆಯರ ಮೇಲೆ ಹಲ್ಲೆ: ಕ್ರಮ ಜರುಗಿಸಲು ಒತ್ತಾಯ

Update: 2016-05-03 18:03 GMT

ಚಿಕ್ಕಮಗಳೂರು, ಮೇ3: ವಸ್ತಾರೆ ಹೋಬಳಿ ಬಳಿಯ ಮೈಲಿಮನೆ ಗ್ರಾಮದ ಗಡಬನಹಳ್ಳಿ ಎಂಬಲ್ಲಿ ದಲಿತ ಕಾಲನಿಯ ಮಹಿಳೆಯರ ಮೇಲೆ ೂ ವಿವಾದದ ಸಂಬಂಧ ಮೇಲ್ವರ್ಗದ ಜನರು ನಡೆಸಿರುವ ಹಲ್ಲೆ ಕೃತ್ಯವನ್ನು ಖಂಡಿಸುವುದಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಅಲ್ಪಸಂಖ್ಯಾತ, ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕೆ.ಪಿ.ರಾಜರತ್ನಂ ಹೇಳಿದರು.

ಮಂಗಳವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಡಬನಹಳ್ಳಿಯ ದಲಿತ ಕಾಲನಿಯ ಮಹಿಳೆಯರಾದ ಗಂಗಮ್ಮ, ಹೇಮಾವತಿ, ಪುಟ್ಟಮ್ಮ ಹಾಗೂ ವೆಂಕಟೇಶ್ ಎಂಬವರ ಮೇಲೆ ಸವರ್ಣೀಯರಾದ ಶಂಕರೇಗೌಡ, ಕೃಷ್ಣಮೂರ್ತಿ, ಸತೀಶ್, ಮಂಜುನಾಥ್, ನಂದೀಶ್ ಮತ್ತಿತರರು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಕೊಲೆ ಬೆದರಿಕೆ ಕೂಡ ಹಾಕಿ ಗ್ರಾಮದ ಜನರಲ್ಲಿ ಭೀತಿ ಉಂಟು ಮಾಡಿದ್ದಾರೆ. ಈ ಕುರಿತು ರಕ್ಷಣೆ ಒದಗಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಮೈಲಿಮನೆ ಗ್ರಾಮದ ಸ.ನ.350ರಲ್ಲಿ 2.36 ಎಕರೆ ಭೂಮಿಯನ್ನು ಗ್ರಾಮದ ಸ್ಮಶಾನಕ್ಕಾಗಿ ಕಾಯ್ದಿರಿಸಲಾಗಿದೆ. ಈ ಪೈಕಿ 0.20 ಗುಂಟೆ ಜಾಗವು ದಲಿತ ಕಾಲನಿಯ ಮುಂಭಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಸಮತಟ್ಟಾದ ಪ್ರದೇಶವಿದೆ. ಈ ಜಾಗವನ್ನು ಅಂಬೇಡ್ಕರ್‌ರ ಹೆಸರಿನಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಕಾಯ್ದಿರಿಸಲಾಗಿತ್ತು. ಅದನ್ನು ಇತ್ತೀಚೆಗೆ ಶಂಕರೇಗೌಡ ಮತ್ತಿತರರು ಆಟದ ಮೈದಾನಕ್ಕೆ ಬಿಟ್ಟು ಕೊಡುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಿದರು.

ಅಂಬೇಡ್ಕರ್‌ಭವನಕ್ಕೆ ಕಾಯ್ದಿರಿಸಿರುವ ಜಾಗವನ್ನು ಆಟದ ಮೈದಾನಕ್ಕೆ ಬಿಟ್ಟು ಕೊಡುವುದಿಲ್ಲ. ಇದರ ಆಸುಪಾಸಿನಲ್ಲಿ ಎಲ್ಲೂ ಮೇಲ್ಜಾತಿಯವರ ಮನೆಯೂ ಇಲ್ಲ. ಇರುವುದೆಲ್ಲವೂ ದಲಿತರ ಮನೆಯಾಗಿದೆ. ದಲಿತ ಮಹಿಳೆಯರು ನೀರು ತರಲು ಅದೇ ಜಾಗದಲ್ಲಿ ತೆರಳಬೇಕು. ಆದ್ದರಿಂದ ಮೇಲ್ವರ್ಗದವರು ಆಟವಾಡಲು ಅಲ್ಲಿ ಅವಕಾಶ ನೀಡುವುದು ಸರಿಯಲ್ಲ. ಎ.28ರಂದು ಊರಿನ ಗಂಡಸರೆಲ್ಲರೂ ಚಿಕ್ಕಮಗಳೂರಿಗೆ ಅಗತ್ಯ ನಿಮಿತ್ತ ತೆರಳಿದ್ದಾಗ ಆರೋಪಿಗಳು ಗ್ರಾಮದಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

 ಸುದ್ದಿಗೋಷ್ಠಿಯಲ್ಲಿ ಕೋಸೌವೇ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿಯುದ್ದೀನ್, ಬಿಳೇಕಲ್ಲು ಬಾಲಕೃಷ್ಣ, ಟಿ.ಎಲ್.ಗಣೇಶ್, ಅಂಗಡಿ ಚಂದ್ರು, ಮಲ್ಲೇಶ್, ನಾಗರಾಜ್, ಚಂದ್ರಶೇಖರ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News