×
Ad

ಅಧಿಕಾರಿಗಳ ಮುಗಿದ ಗ್ರಾಮವಾಸ್ತವ್ಯ: ನಿರೀಕ್ಷೆಯಲ್ಲಿ ಜನತೆ

Update: 2016-05-04 22:04 IST

<ಇಮ್ರಾನ್ ಸಾಗರ್

 ಸಾಗರ, ಮೇ 4: ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಯವರ ಸೂಚನೆಯಂತೆ ಎರಡು ದಿನಗಳ ಕಾಲ ತಾಲೂಕಿನ ವಿವಿಧ ಭಾಗಗಳಲ್ಲಿ ಏರ್ಪಡಿಸಿದ್ದ ಗ್ರಾಮ ವಾಸ್ತವ್ಯ ಮಂಗಳವಾರ ಮುಗಿದಿದೆ. ಅಧಿಕಾರಿಗಳು ಹೋದಲ್ಲೆಲ್ಲಾ ಜನರು ಕುಡಿಯುವ ನೀರನ್ನು ಪೂರೈಸುವಂತೆ ಗೋಗರೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಲ್ಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗಭೂಷಣ್ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮ ಪಂಚಾಯತ್ ವ್ಯಾಪ್ತಿಯ 9 ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಎಲ್ಲ ಊರುಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಎದ್ದು ಕಾಣುತ್ತಿದೆ. ಕಾಗೆಹಳ್ಳ ಗ್ರಾಮದಲ್ಲಿ ದಿನಕ್ಕೆ 3 ಬಾರಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜೊತೆಗೆ ಈ ಭಾಗದಲ್ಲಿರುವ ಸುಮಾರು 36 ಕೆರೆಗಳು ಹಾಗೂ ತೆರೆದ ಬಾವಿಗಳು ಪೂರ್ಣ ಬತ್ತಿ ಹೋಗಿದೆ. ಕೆರೆಗಳು ಮತ್ತು ಬಾವಿಗಳ ಹೂಳು ತೆಗೆದು ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಹಾವಿನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನೋಡೆಲ್ ಅಧಿಕಾರಿಯಾಗಿ ನೇಮಕ ಗೊಂಡಿದ್ದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ನಿರ್ದೇಶಕ ಸಿಂಗಪ್ಪ ಅವರ ನೇತೃತ್ವದ ತಂಡ ಪರಿಶೀಲನೆ ನಡೆಸಿ, ಬಾವಿಗಳು, ಕೆರೆಗಳ ಹೂಳು ಎತ್ತದ ಪರಿಣಾಮ ಸಂಪೂರ್ಣ ಬತ್ತಿಹೋಗಿರುವ ಅಂಶ ಬೆಳಕಿಗೆ ಬಂದಿದೆ. ಅಲ್ಲದೆ, ಸದ್ಯಕ್ಕೆ ಮೇವಿನ ಸಮಸ್ಯೆ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಬಿಸಿಲಿಣ ತಾಪ ಂದಿನಂತೆಯೇ ಮುಂದುವರಿದರೆ ಮೇವಿನ ಸಮಸ್ಯೆ ಉದ್ಭವಿಸಲಿದೆ ಎಂದು ಮಾಹಿತಿ ನಿಡಿದರು.

ಅಧಿಕಾರಿಗಳ ತಂಡ ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ ಡಾ. ಎಚ್.ಚಂದ್ರಶೇಖರಪ್ಪ ನೇತೃತ್ವದ ತಂಡ ನಡೆಸಿದ ಸಮೀಕ್ಷೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕಣಸೆ ಇನ್ನಿತರ ಭಾಗದಲ್ಲಿ ಕುಡಿಯುವ ನೀರಿನ ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಈ ಭಾಗದಲ್ಲಿ ಹೊಸ ಬೋರ್‌ವೆಲ್ ನಿರ್ಮಾಣ, ಬಾವಿಯ ಆಳಹೆಚ್ಚಿಸುವುದು, ಕೆರೆಗಳ ಹೂಳೆತ್ತುವುದು, ಹೊಳೆ ಬ್ಯಾರೇಜ್‌ಗಳ ದುರಸ್ತಿ, ರಸ್ತೆ ಅಭಿವೃದ್ಧಿ, ಟ್ರಾನ್ಸ್‌ಫಾರ್ಮರ್ ಅಳವಡಿಕೆ ಇನ್ನಿತರ ಸಮಸ್ಯೆಗಳ ಕುರಿತು ಸಾರ್ವಜನಿಕರು ಅಧಿಕಾರಿಗಳ ಗಮನ ಸೆಳೆದರು. ಹಿರೇನೆಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ನೇತೃತ್ವದ ತಂಡ ಸಮೀಕ್ಷೆ ನಡೆಸಿ, ಕುಡಿಯುವ ನೀರಿನ ಸಮರ್ಪಕ ಪೂರೈಕೆ ಮಾಡದ ಆಡಳಿತದ ಕ್ರಮದ ಬಗ್ಗೆ ಜನರು ದೂರಿದ್ದನ್ನು ದಾಖಲಿಸಿಕೊಂಡು ಶೀಘ್ರ ಪರಿಹಾರ ಒದಗಿಸುವ ಭರವಸೆ ನೀಡಿದರು. ಹಿರೇನೆಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಜೊತೆಗೆ ಶೌಚಾಲಯ ನಿರ್ಮಾಣ, ಬಾವಿಗಳ ನಿರ್ಮಾಣ ಕುರಿತು ಜನರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಹೆಗ್ಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಸಿದ್ದಲಿಂಗಯ್ಯ ನೇತೃತ್ವದ ತಂಡ ಭೇಟಿ ನೀಡಿದಾಗ ಪ್ರಮುಖವಾಗಿ ಬಾವಿಗಳು ಬತ್ತಿದ್ದು, ಟ್ಯಾಂಕರ್ ಮೂಲಕ ಕೆಲವು ಭಾಗಗಳಲ್ಲಿ ನೀರಿನ ಸರಬರಾಜು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್‌ಗೆ ವರದಿ ಸಲ್ಲಿಸುವುದಾಗಿ ಸಿದ್ದಲಿಂಗಯ್ಯ ಭರವಸೆ ನೀಡಿದರು.

ಅಧಿಕಾರಿಗಳ ಎರಡು ದಿನಗಳ ಗ್ರಾಮವಾಸ್ತವ್ಯ ಸಮಾಪಣೆ ಗೊಂಡಿದ್ದು, ಈಗ ಸಾರ್ವಜನಿಕರು ನೀಡಿರುವ ಮನವಿ, ಅಧಿಕಾರಿಗಳು ಕಣ್ಣಾರೆ ಕಂಡ ಸಮಸ್ಯೆ ಕುರಿತು ವರದಿ ಸಿದ್ಧಪಡಿಸಿ ಜಿಲ್ಲಾ ಪಂಚಾಯತ್‌ಗೆ ನೀಡಿದ ಬಳಿಕ ಎಷ್ಟು ದಿನದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎನ್ನುವುದನ್ನು ಕಾದು ನೋಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News