ಪೊಲೀಸ್ ಅಧಿಕಾರಿಯಿಂದ ದೈಹಿಕ ದೌರ್ಜನ್ಯ ಆರೋಪ
ಬೆಂಗಳೂರು, ಮೇ 4: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ವಿರುದ್ಧ ಅವರ ಪತ್ನಿ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ತಡೆ ಸಮಿತಿಗೆ ದೂರು ನೀಡಿದ್ದಾರೆ.
ಬುಧವಾರ ಶಾಸಕರ ಭವನದಲ್ಲಿ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪರನ್ನು ಭೇಟಿ ಮಾಡಿದ ಸಂತ್ರಸ್ತ ಮಹಿಳೆ ಮಾನಸಾ, ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುವ ತನ್ನ ಪತಿ ನನ್ನ ಮೇಲೆ ದೈಹಿಕ ಹಲ್ಲೆ ನಡೆಸುತ್ತಿದ್ದಾರೆ. ಆದುದರಿಂದ, ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಸಲ್ಲಿಸಿದ್ದಾರೆ.
ಮದುವೆ ಸಂದರ್ಭದಲ್ಲಿ ವರದಕ್ಷಿಣೆ ರೂಪವಾಗಿ 3 ಲಕ್ಷ ರೂ.ನಗದು ಹಾಗೂ 300 ಗ್ರಾಂ ಚಿನ್ನಾಭರಣವನ್ನು ಸತೀಶ್‌ಗೆ ನೀಡಲಾಗಿತ್ತು. ಆದರೆ, ಇದೀಗ ಮತ್ತೆ ವರದಕ್ಷಿಣೆಗಾಗಿ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಾನಸಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಮಾನಸಾ ನೀಡಿದ ದೂರನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಗ್ರಪ್ಪ, ಎಂ.ಟೆಕ್ ಪದವೀಧರೆಯಾಗಿರುವ ಮಾನಸಾ ಅವರ ಪತಿ ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಅಕ್ರಮ ಸಂಬಂಧ ಇಟ್ಟುಕೊಂಡಿರುವ ಬಗ್ಗೆ ದೂರು ನೀಡಿದ್ದಾರೆ ಎಂದರು.
ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸ್ ಅಧಿಕಾರಿಗಳು ತಮ್ಮ ಕುಟುಂಬದವರಿಗೆ ಕಿರುಕುಳ ನೀಡುವುದು ಎಷ್ಟರಮಟ್ಟಿಗೆ ಸರಿ. ಇಂತಹ ಅಧಿಕಾರಿಗಳಿಗೆ ಕಾನೂನು ರೀತಿ ಶಿಕ್ಷೆಯಾಗಬೇಕು. ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರೊಂದಿಗೆ ಮಾತನಾಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.
ನನ್ನ ಪತಿಯು ನನಗೆ ನಿತ್ಯವೂ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ನೊಂದು ಹೋಗಿದ್ದೇನೆ. ಅಲ್ಲದೆ, ನನ್ನ ಪತಿಗೆ ಚನ್ನರಾಯಪಟ್ಟಣದ ಟೌನ್ ಪೊಲೀಸ್‌ಠಾಣೆಯ ಪೇದೆ ಪುನೀತಾ ಜೊತೆ ಅಕ್ರಮ ಸಂಬಂಧವಿದೆ. ಅವರು ನನ್ನ ಪತಿಗೆ ದಿನಕ್ಕೆ ಕನಿಷ್ಠ 20 ಬಾರಿಯಾದರೂ ದೂರವಾಣಿ ಕರೆ ಮಾಡುತ್ತಾರೆ ಎಂದು ಸಂತ್ರಸ್ತ ಮಹಿಳೆ ಮಾನಸಾ ಆರೋಪಿಸಿದರು.
ನನ್ನ ಪತಿ ಬೆದರಿಕೆ ಸ್ವಭಾವದವರು. ಆದರೆ, ಅವರಿಗೆ ಪುನೀತಾ ಮತ್ತು ಕಂದಾಯ ನಿರೀಕ್ಷಕ ಮುಕುಂದ್ ಎಂಬವರು ಪ್ರೇರೇಪಿಸುತ್ತಿದ್ದಾರೆ. ಅಲ್ಲದೆ, ಸತೀಶ್‌ಗೆ ವಿಚ್ಛೇದನ ನೀಡಬೇಕು. ಇಲ್ಲದಿದ್ದರೆ ಕೊಲೆ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ದೂರಿದರು.
ನನ್ನ ಪತಿಯ ಮನೆಯವರು ಅವರಿಗೆ ಬೆಂಬಲ ನೀಡುತ್ತಿದ್ದಾರೆ. 50 ಲಕ್ಷ ರೂ.ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾರೆ. ಅಲ್ಲದೆ, ತನಗೆ ಎರಡು ಬಾರಿ ಹತ್ಯೆ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ಮಾನಸಾ ಆರೋಪಿಸಿದರು.