×
Ad

ಕೊಡಗು ಜಿಲ್ಲೆಗೆ 6 ಕಸಾಪ ಭವನ ಮಂಜೂರು

Update: 2016-05-04 22:08 IST

ಮಡಿಕೇರಿ, ಮೇ 4: ರಾಜ್ಯದ 100 ಗ್ರಾಮಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಿಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವ ಎಚ್.ಕೆ.ಪಾಟೀಲ್ ಅವರು ಅನುಮೋದನೆ ನೀಡಿದ್ದು, ಕೊಡಗು ಜಿಲ್ಲೆಯಲ್ಲಿ 6 ಸಾಹಿತ್ಯ ಭವನಗಳು ನಿರ್ಮಾಣಗೊಳ್ಳಲಿದೆ ಎಂದು ಕಸಾಪ ಕೊಡಗು ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪ ಶತಮಾನೋತ್ಸವವನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸುಮಾರು 500 ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಪರಿಷತ್‌ನ ರಾಜ್ಯಾಧ್ಯಕ್ಷರು ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು ಮೊದಲ ಹಂತದಲ್ಲಿ 100 ಭವನಗಳನ್ನು ನಿರ್ಮಿಸಲು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು. ಕಸಾಪದ ರಾಜ್ಯಾಧ್ಯಕ್ಷ ಡಾ. ಮನುಬಳಿಗಾರ್ ಅವರ ಬಳಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ 6 ಭವನಗಳು ಮಂಜೂರಾಗಿದೆ. ಪ್ರತಿ ಸಾಹಿತ್ಯ ಭವನ ನಿರ್ಮಾಣಕ್ಕೆ 10 ರಿಂದ 15 ಲಕ್ಷ ರೂ. ಖರ್ಚು ಮಾಡಲಾಗುತ್ತಿದ್ದು, ಇದನ್ನು ಪಂಚಾಯತ್ ರಾಜ್ ಇಲಾಖೆ ಭರಿಸಲಿದೆ. ಜಿಲ್ಲೆಯ ಮೂರು ತಾಲೂಕುಗಳಲ್ಲಿ ತಲಾ 2 ಸಾಹಿತ್ಯ ಭವನಗಳು ನಿರ್ಮಾಣಗೊಳ್ಳಲಿದ್ದು, ಇದಕ್ಕೆ ಹಿರಿಯ ಸಾಹಿತಿಗಳ ಹೆಸರನ್ನು ನೀಡಲಾಗುವುದು ಎಂದರು. ಸಾಹಿತ್ಯ ಭವನದ ನಿರ್ಮಾಣಕ್ಕೆ ಸಂಬಂಧಿಸಿದ ಗ್ರಾಪಂಗಳು, ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದ ಅವರು ಭವನ ನಿರ್ಮಾಣಕ್ಕೆ 3ರಿಂದ 10 ಸೆಂಟ್ಸ್ ಜಾಗದ ಅಗತ್ಯವಿದೆ ಎಂದರು. ಕನ್ನಡ ಸಾಹಿತ್ಯದ ಕೃಷಿಗೆ ಈ ಭವನ ಸಹಕಾರಿಯಾಗಲಿದ್ದು, ಭವನದ ನಿರ್ವಹಣೆಯನ್ನು ಕಸಾಪದ ಜಿಲ್ಲಾ ಸಮಿತಿ ಮಾಡಲಿದೆ ಎಂದು ಲೋಕೇಶ್ ಸಾಗರ್ ತಿಳಿಸಿದರು.

ಕಸಾಪದ ಸಂಸ್ಥಾಪನ ದಿನವನ್ನು ಮೇ 5 ರಂದು ಕುಶಾಲನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಚರಿಸಲಾಗುತ್ತಿದ್ದು, ಜಿಲ್ಲೆಯ ಮೊದಲ ವಿದ್ಯಾರ್ಥಿಗಳ ಕನ್ನಡ ಸಂಘವನ್ನು ಜಿಲ್ಲಾಧಿಕಾರಿಗಳು ಉದ್ಘಾಟಿಸಲಿದ್ದಾರೆ ಎಂದು ಲೋಕೇಶ್ ಸಾಗರ್ ಹೇಳಿದರು.

ಸುದ್ದಿಗೋಷ್ಠಿಯಲ್ಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಸುಭಾಷ್ ನಾಣಯ್ಯ, ಕಾರ್ಯದರ್ಶಿ ಕೆ.ಎಸ್.ರಮೇಶ್, ನಿರ್ದೇಶಕ ಅಶ್ವತ್, ನಂಜುಂಡ ಸ್ವಾಮಿ, ಹಾಗೂ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News