×
Ad

ಕಾರ್ಮಿಕರ ಹಿತರಕ್ಷಣೆಗಾಗಿ ಅನೇಕ ಕಾನೂನುಗಳ ರಚನೆ: ನ್ಯಾ. ಬಿ.ನಂದಕುಮಾರ್

Update: 2016-05-04 22:16 IST

ಚಿಕ್ಕಮಗಳೂರು, ಮೇ 4: ಕಾರ್ಮಿಕರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅನೇಕ ಕಾನೂನುಗಳು ಜಾರಿಯಲ್ಲಿದ್ದು, ಕಾರ್ಮಿಕರ ಹಿತರಕ್ಷಣೆ ಇಂತಹ ಕಾನೂನುಗಳ ರಚನೆಯ ಮೂಲ ಉದ್ದೇಶವಾಗಿದೆ ಎಂದು ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬಿ.ನಂದಕುಮಾರ್ ತಿಳಿಸಿದ್ದಾರೆ.

ಅವರು ನಗರದ ಚಾಮುಂಡಿ ಕ್ಯೂರಿಂಗ್ ವರ್ಕ್ಸ್ ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಚಾಮುಂಡಿ ಕ್ಯೂರಿಂಗ್ ವರ್ಕ್ಸ್ ಹಾಗೂ ವಾರ್ತಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕರಿಗಿರುವ ಹಕ್ಕುಗಳ ಬಗ್ಗೆ ಹಾಗೂ ಅವರಿಗೆ ಸರಕಾರದಿಂದ ದೊರೆಯುವಂತಹ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಸಲುವಾಗಿ ಕಾನೂನು ಸೇವಾ ಪ್ರಾಧಿಕಾರವು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ತಾವುಗಳು ಇದರ ಸದುಪಯೋಗಪಡಿಸಿಕೊಳ್ಳುವ ಜೊತೆಗೆ ಈ ಬಗ್ಗೆ ಮಾಹಿತಿ ಇಲ್ಲದ ಇತರ ಕಾರ್ಮಿಕರಿಗೂ ಮಾಹಿತಿ ನೀಡುವ ಮೂಲಕ ಈ ಕಾನೂನು ಜ್ಞಾನ ಪ್ರಸಾರದಲ್ಲಿ ಪ್ರಾಧಿಕಾರದೊಂದಿಗೆ ಕೈಜೋಡಿಸುವಂತೆ ಕರೆ ನೀಡಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ದಯಾನಂದ ವಿ.ಎಚ್.ಮಾತನಾಡಿ, ಕಾರ್ಮಿಕ ಕಾನೂನುಗಳಿಗಷ್ಟೇ ಮಾಹಿತಿ ನೀಡಲು ಕಾನೂನು ಸೇವಾ ಪ್ರಾಧಿಕಾರಗಳು ಸೀಮಿತವಾಗಿರದೇ, ಪ್ರತಿಯೊಬ್ಬ ನಾಗರಿಕನು ಸಂಕಷ್ಟದಲ್ಲಿದ್ದಾಗ ಪ್ರಾಧಿಕಾರವನ್ನು ಸಂಪರ್ಕಿಸಿದಲ್ಲಿ ಅವರಿಗೆ ಕಾನೂನಿನ ಸೂಕ್ತ ಅರಿವು ಹಾಗೂ ನೆರವು ದೊರಕಿಸುವಲ್ಲಿ ಪ್ರಾಧಿಕಾರವು ಸಕ್ರಿಯವಾಗಿದೆ ಎಂದು ತಿಳಿಸಿದರು.

 ಸಹಾಯಕ ಕಾರ್ಮಿಕ ಆಯುಕ್ತ ಎ.ಸಿ. ತಮ್ಮಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಂದು ಸಂಸ್ಥೆಯ ಮಾಲಕರು ಹಾಗೂ ಕಾರ್ಮಿಕರ ನಡುವೆ ಬಾಂಧವ್ಯ ಉತ್ತಮವಾಗಿದ್ದಲ್ಲಿ ಯಾವುದೇ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರುವುದಿಲ್ಲ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಚ್.ಎಚ್ ಕೃಷ್ಣಮೂರ್ತಿ ಹಾಗೂ ಚಾಮುಂಡಿ ಕ್ಯೂರಿಂಗ್ ವರ್ಕ್ಸ್ ನ ವ್ಯವಸ್ಥಾಪಕ ಜೆಕೋಬ್ ಕುರಿಯನ್ ಮಾತನಾಡಿದರು.

ಈ ಸಂದರ್ಭದಲ್ಲಿ ವಕೀಲ ಕೆ.ಎಂ.ಅಬ್ದುಲ್, ಕಾರ್ಮಿಕರ ಹಕ್ಕುಗಳು ಮತ್ತು ಕರ್ತವ್ಯಗಳು ಹಾಗೂ ಕಾರ್ಮಿಕರಿಗೆ ಸರಕಾರದಿಂದ ದೊರೆಯುವಂತಹ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಅನುರಾಧ ಪ್ರಾರ್ಥಿಸಿ, ವಕೀಲ ದೇವೇಂದ್ರಕುಮಾರ್ ಜೈನ್ ಸ್ವಾಗತಿಸಿದರು. ಕಾನೂನು ಸೇವಾ ಪ್ರಾಧಿಕಾರದ ರಾಘವೇಂದ್ರ ಸಿ.ವಿ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News