‘ಮದ್ಯಪಾನ ಚಟಕ್ಕೆ ಬಲಿಯಾಗುತ್ತಿರುವ ವಿದ್ಯಾವಂತರು: ಪ್ರಶಾಂತ್ ಚಿಪ್ರಗುತ್ತಿ
ಚಿಕ್ಕಮಗಳೂರು, ಮೇ 4: ಪಾನಮುಕ್ತ ಜನರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಕುಡಿತ ಒಂದು ಫ್ಯಾಶನ್ ಆಗಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ ಹೇಳಿದ್ದಾರೆ. ಅವರು ಮಲ್ಲಂದೂರಿನ ಶ್ರೀಮಳ್ಳೂರಮ್ಮ ದೇವಸ್ಥಾನ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆದ 917ನೆ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿ, ಇಂದಿನ ಕಾಲದಲ್ಲಿ ವಿದ್ಯಾವಂತ ಜನರು ಹೆಚ್ಚು ಮದ್ಯಪಾನ ಚಟಕ್ಕೆ ಬಲಿಯಾಗುತ್ತಿದ್ದಾರೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ಕಲಿಸುವುದರಿಂದ ಉತ್ತಮ ನಾಗರಿಕರಾಗಲು ಸಾಧ್ಯ ಎಂದರು.
ಮಲ್ಲಂದೂರು ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಸತೀಶ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟನೆ ಮಾಡುತ್ತಿದ್ದು, ಜನರು ಇದರ ಪ್ರಯೋಜನ ಪಡೆದುಕೊಂಡು ಉತ್ತಮ ನಾಗರಿಕರಾಗಬೇಕು ಎಂದು ಹೇಳಿದರು.
ಯೋಜನೆಯ ಜಿಲ್ಲಾ ನಿರ್ದೇಶಕಿ ಗೀತಾ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಮೂಲಕ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಂತಹ ಕೆಲಸವನ್ನು ಮಾಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮರಾಜ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ರಾಘವೇಂದ್ರ, ಮಾಜಿ ತಾಪಂ ಅಧ್ಯಕ್ಷ ಎನ್.ಎಂ.ಮಂಜುನಾಥ್, ಶಂಕರೇಗೌಡ, ಅನುರಾಜೇಗೌಡ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ವರದರಾಜ್, ಜಾನಕಿರಾಮ್, ನಿರಂಜನ್, ಕವಿಕಲ್ ಮಠಗಂಗಮ್ಮ ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕ ಎ.ಜೆ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಯೋಜನಾಧಿಕಾರಿ ಬೇಬಿ ಸ್ವಾಗತಿಸಿದರೆ, ಸೇವಾ ಪ್ರತಿನಿಧಿ ಹರೀಶ್ ವಂದಿಸಿದರು.