ಪ್ರಶ್ನೆಪತ್ರಿಕೆ ಸೋರಿಕೆ: ನನಗೇನೂ ಗೊತ್ತಿಲ್ಲವೆಂದ ಗುರೂಜಿ

Update: 2016-05-04 18:16 GMT

ಬೆಂಗಳೂರು, ಮೇ 4: ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ರೂವಾರಿ ಶಿವಕುಮಾರಯ್ಯನನ್ನು ಬಂಧಿಸಿದ ಬೆನ್ನಲ್ಲೇ ಆತನನ್ನು ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಪ್ರಕರಣದ ಸಂಬಂಧ ನನಗೇನೂ ಗೊತ್ತಿಲ್ಲ. ನಾನು ಸೋರಿಕೆ ಚಟ ಬಿಟ್ಟದ್ದೀನಿ. ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಪದೇ ಪದೇ ಹೇಳುತ್ತಿದ್ದಾನೆ ಎಂದು ಗೊತ್ತಾಗಿದೆ.ಬಂಧಿತ ಆರೋಪಿ ಶಿವಕುಮಾರಯ್ಯ ಯಾನೆ ಗುರೂಜಿಯನ್ನು ಕಳೆದ ರಾತ್ರಿಯಿಂದಲೇ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಆದರೆ, ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಪಟ್ಟಂತೆ ಯಾವುದೇ ರೀತಿಯ ಮಾಹಿತಿ ನೀಡುತಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಹೆಸರು ಪ್ರಸ್ತಾಪಿಸಲಾಗಿದೆ ಎಂದು ಹೇಳುತ್ತಿದ್ದಾನೆ ಎನ್ನಲಾಗಿದೆ.

ಅಲ್ಲದೆ, ಸಿಐಡಿ ಹಿರಿಯ ಅಧಿಕಾರಿಗಳು ಬುಧವಾರ ಹೆಚ್ಚಿನ ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಶಿವಕುಮಾರಯ್ಯ ಕೆಲ ಸ್ಫೋಟಕ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾನೆ ಎಂದು ತಿಳಿದುಬಂದಿದ್ದು, ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಪಿಯು ಮಂಡಳಿಯ ‘ಡಿ’ ದರ್ಜೆಯ ನೌಕರರು ಕಾರಣ ಎನ್ನುವ ಮಾಹಿತಿಯನ್ನು ನೀಡಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿವೆ.

ಪಿಯು ಮಂಡಳಿಯ ಡಿ ದರ್ಜೆಯ ನೌಕರರ ಸಹಾಯದಿಂದ ಪ್ರಶ್ನೆ ಪತ್ರಿಕೆಯನ್ನು ಕಿರಣ್ ಯಾನೆ ಕುಮಾರಸ್ವಾಮಿ ಕಳವು ಮಾಡಿಸಿದ್ದ. ತದನಂತರ ಶಿವಕುಮಾರಯ್ಯ ನಿರ್ದೇಶನದಂತೆ ಪ್ರಶ್ನೆಪತ್ರಿಕೆ ಮಾರಾಟ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ನ್ಯಾಯಾಲಯಕ್ಕೆ ಹಾಜರು

ಸೋರಿಕೆ ಪ್ರಕರಣದ ಆರೋಪಿಗಳಾದ ಕೆ.ಎಂ.ಮುರಳೀಧರ, ಕೆ.ಎಸ್.ರಂಗನಾಥ್ ಹಾಗೂ ಅನಿಲ್‌ನನ್ನು ಸಿಐಡಿ ಅಧಿಕಾರಿಗಳು ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ(ಕೋಕಾ) ಕಾಯ್ದೆಯಡಿ ಇಲ್ಲಿನ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News