ಮತ್ತೂರಿನಲ್ಲಿ ಸೋಮಯಾಗ: ಮೇಕೆಯ ಮಾಂಸ, ಸೋಮರಸ ಸೇವಿಸಿದ ಬ್ರಾಹ್ಮಣರು!

Update: 2016-05-04 18:25 GMT

ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸ

ಶಿವಮೊಗ್ಗ, ಮೇ 4: ಇತ್ತೀಚೆಗೆ ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮದ ಹೊರವಲಯದ ಶ್ರೀಕಂಠಪುರ ಪ್ರದೇಶದ ಅಡಿಕೆ ಕಣದಲ್ಲಿ ಕೆಲ ಸಂಕೇತಿ ಬ್ರಾಹ್ಮಣ ಋತ್ವಿಜರು (ಯಜ್ಞ ನಡೆಸಿಕೊಡುವ ಪುರೋಹಿತರು) ನಡೆಸಿದ ಸೋಮಯಾಗದಲ್ಲಿ ಮೇಕೆ ಬಲಿಕೊಟ್ಟು, ಮಾಂಸ ನೈವೇದ್ಯ ಹಾಗೂ ಸೋಮರಸದಂತಹ ಪೇಯ ಸೇವಿಸಿದ್ದಾರೆಂಬ ‘ಪ್ರಜಾವಾಣಿ’ ಪತ್ರಿಕೆಯ ವರದಿಯು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಕೆಲ ಋತ್ವಿಜರು ಪ್ರಾಣಿ ಬಲಿ ಕೊಟ್ಟು ಮಾಂಸ ನೈವೇದ್ಯ ಮತ್ತು ಸೋಮರಸ ಸೇವನೆ ಮಾಡಿದ ವಿಚಾರವು ಸಂಕೇತಿ ಬ್ರಾಹ್ಮಣ ಸಮುದಾಯದಲ್ಲಿ ವಿಭಿನ್ನ ಅಭಿಪ್ರಾಯಗಳಿಗೆ ಎಡೆ ಮಾಡಿಕೊಟ್ಟಿದೆ ಎನ್ನಲಾಗಿದ್ದು, ಕೆಲವರು ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆನ್ನಲಾಗಿದೆ. ಅದ್ವೈತ ಸಿದ್ಧಾಂತ ಅನುಸರಿಸುವ ಕಟ್ಟಾ ಸಂಪ್ರದಾಯಸ್ಥ ಕೆಲ ಸಂಕೇತಿ ಬ್ರಾಹ್ಮಣರು ಇಂದಿಗೂ ಪ್ರಾಣಿ ಬಲಿಕೊಡುವ ಅನಿಷ್ಟ, ಮೌಢ್ಯಾಚರಣೆಯ ಪದ್ಧತಿ ಮುಂದುವರಿಸಿಕೊಂಡು ಬಂದಿರುವುದಕ್ಕೆ ಆ ಸಮಾಜದಲ್ಲಿಯೇ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ ಎಂದು ಹೇಳಲಾಗಿದೆ.

ನಡೆದಿದ್ದು ಯಾವಾಗ?: ಎ.22ರಿಂದ 27ರವರೆಗೆ ಈ ಸೋಮಯಾಗ ನಡೆಸಲಾಗಿದೆ. ಈ ವೇಳೆ ಎಂಟು ಆಡುಗಳನ್ನು ಬಲಿ ಕೊಡಲಾಗಿದೆ. ಈ ಯಾಗಕ್ಕೆ ಸಂಬಂಧಿಸಿದ ಆಡಿಯೊ ಹಾಗೂ ವೀಡಿಯೊ ತುಣುಕುಗಳು ಲಭ್ಯವಾಗಿವೆ ಎಂದು ವರದಿ ಬಿತ್ತರಿಸಿದ ಪತ್ರಿಕೆಯು ತಿಳಿಸಿದೆ. ಈ ಯಾಗದಲ್ಲಿ ಆಂಧ್ರಪ್ರದೇಶ, ತಮಿಳುನಾಡು ರಾಜ್ಯದ ಸುಮಾರು 17 ಋತ್ವಿಜರು ಭಾಗವಹಿಸಿದ್ದರು. ಹಗಲು-ರಾತ್ರಿ ಸರದಿಯ ಆಧಾರದ ಮೇಲೆ ಈ ಯಾಗ ನಡೆಸಿದ್ದಾರೆ. ಈ ವೇಳೆ ಅಗ್ನಿಕುಂಡಕ್ಕೆ ಎಂಟು ಆಡುಗಳನ್ನು ಬಲಿ ಕೊಡಲಾಗಿದೆ ಎಂದು ತಿಳಿದುಬಂದಿದೆ.

ಏನಿದು ಯಾಗ?: ಸೋಮಯಾಗವು ಅತ್ಯಂತ ಪುರಾತನ ಯಾಗವಾಗಿದ್ದು, ವೇದಗಳ ಕಾಲದಿಂದಲೂ ಅಸ್ತಿತ್ವದಲ್ಲಿದೆ. ದೇವರನ್ನು ಒಲಿಸಿಕೊಳ್ಳಲು, ಇಷ್ಟಾರ್ಥ ಈಡೇರಿಕೆಗೆ, ಲೋಕ ಕಲ್ಯಾಣಾರ್ಥವಾಗಿ ಯಜ್ಞ ಕುಂಡಕ್ಕೆ ಪ್ರಾಣಿಗಳನ್ನು ಬಲಿ ಕೊಡಲಾಗುತ್ತದೆ. ರಾಮಾಯಣ ಕಾಲದ ದಶರಥ, ಶ್ರೀರಾಮರು ಇಂತಹ ಯಾಗ ನಡೆಸಿದ್ದರ ಉಲ್ಲೇಖವಿದೆ. ಆದರೆ ಪ್ರಾಣಿ ಬಲಿ ಕೊಡುವ ಈ ಯಾಗವು ಮೌಢ್ಯದ ಸಂಕೇತವಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ದೂರುತ್ತಾರೆ.

ಮಾಂಸ ಸೇವಿಸುತ್ತಾರೆ: ಅಗ್ನಿಕುಂಡದ ಬಳಿ ಆಡುಗಳನ್ನು ತಂದು ಪೂಜಿಸಲಾಗುತ್ತದೆ. ಅದು ಕೂಗದಂತೆ ಬಾಯಿಗೆ ಬಟ್ಟೆ ಕಟ್ಟಿ ನಂತರ ಬಲಿ ಕೊಡಲಾಗುತ್ತದೆ. ತದನಂತರ ಆಡಿನ ಒಂದೊಂದೇ ಅಂಗ ಬೇರ್ಪಡಿಸಿ ಅಗ್ನಿಗೆ ಆಹುತಿ ನೀಡಲಾಗುತ್ತದೆ.

ಬೆಂದ ಮಾಂಸವನ್ನು ಯಾಗದಲ್ಲಿ ಭಾಗವಹಿಸಿದ ಋತ್ವಿಜರು ಹಾಗೂ ಇತರೆ ಭಕ್ತರು ಸೇವಿಸುತ್ತಾರೆ. ಇದಕ್ಕೂ ಮುನ್ನ ಭಟ್ಟಿ ಇಳಿಸಿದ ಹೆಂಡವಾದ ಸೋಮರಸವನ್ನು ಕುಡಿಯಲಾಗುತ್ತದೆ.

**ಶಕ್ತಿ ಪ್ರಾಪ್ತಿಗೆ ಕೆಲ ರಾಜಕಾರಣಿಗಳು ತಮ್ಮ ರಾಜಕೀಯ ಬಲ ವೃದ್ದಿಸಿಕೊಳ್ಳಲು, ಎದುರಾಳಿ ರಾಜಕಾರಣಿಗಳ ಅಧಿಕಾರ ಶಕ್ತಿ ಕುಂದಿಸಲು, ಭಯ ನಿವಾರಣೆಗಾಗಿ ಬ್ರಾಹ್ಮಣರ ಮೂಲಕ ಸೋಮಯಾಗ ಮಾಡಿಸುತ್ತಾರೆ ಎಂಬ ಮಾತು ಕೂಡ ರಾಜಕೀಯ ವಲಯದಲ್ಲಿ ಕೇಳಿಬರುತ್ತದೆ. ಈ ಹಿಂದೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಇದೇ ಮತ್ತೂರು ಗ್ರಾಮದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರು ಎಸ್.ಎಂ.ಕೃಷ್ಣಗೆ ಅಧಿಕಾರ ತಪ್ಪಿಸುವ ಉದ್ದೇಶದಿಂದ ಸೋಮಯಾಗ ನಡೆಸಿ, ನೂರಾರು ಆಡುಗಳನ್ನು ಬಲಿಕೊಡಲಾಗಿತ್ತು ಎಂಬು ಮಾತು ಕೂಡ ಇದೀಗ ಕೇಳಿಬರುತ್ತಿದೆ. ಇದಕ್ಕೆ ಸಂಕೇತಿ ಬ್ರಾಹ್ಮಣ ಸಮುದಾಯದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ ಕಾರಣದಿಂದ ಈ ಮೌಢ್ಯ ಆಚರಣೆಯು ಸ್ಥಗಿತಗೊಂಡಿತ್ತು ಎನ್ನಲಾಗಿದೆ. ಆದರೆ ಇದೀಗ ಈ ಕಂದಾಚಾರವು ಮತ್ತೆ ಮತ್ತೂರಿನಲ್ಲಿ ನಡೆದಿದೆ ಎಂಬ ಮಾತು ಕೇಳಿಬರುತ್ತಿದ್ದು, ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿರುವುದಂತೂ ಸತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News