ಸರಕಾರಿ ಗುತ್ತಿಗೆ ಪಡೆಯಲು ಬಿನ್ ಲಾದೆನ್ ಕಂಪೆನಿಗೆ ಅವಕಾಶ

Update: 2016-05-05 10:30 GMT

ರಿಯಾದ್, ಮೇ 5: ಸರಕಾರಿ ಯೋಜನೆಗಳನ್ನು ಪಡೆಯುವುದಕ್ಕಾಗಿ ಬಿಡ್ಡಿಂಗ್ ಸಲ್ಲಿಸುವುದನ್ನು ಮುಂದುವರಿಸಲು ಸೌದಿ ಅರೇಬಿಯದ ಬೃಹತ್ ನಿರ್ಮಾಣ ಕಂಪೆನಿ ಸೌದಿ ಬಿನ್‌ಲಾದೆನ್ ಗ್ರೂಪ್ (ಎಸ್‌ಬಿಜಿ)ಗೆ ಅನುಮತಿ ನೀಡಲು ಸರಕಾರ ನಿರ್ಧರಿಸಿದೆ.

ಈ ಕ್ರಮ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಕಂಪೆನಿ ಮತ್ತು ಅದಕ್ಕೆ ಸಾಲ ನೀಡಿರುವ ಬ್ಯಾಂಕ್‌ಗಳ ಮೇಲಿನ ಒತ್ತಡಗಳನ್ನು ಕೊಂಚ ನಿವಾರಿಸಬಹುದಾಗಿದೆ ಎಂದು ‘ಅಲ್-ವತನ್’ ಪತ್ರಿಕೆ ಗುರುವಾರ ವರದಿ ಮಾಡಿದೆ.

ಕಳೆದ ವರ್ಷದ ಸೆಪ್ಟಂಬರ್‌ನಿಂದ ಕಂಪೆನಿ ಬಿಕ್ಕಟ್ಟು ಎದುರಿಸುತ್ತಿದೆ. ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಮರಳು ಬಿರುಗಾಳಿಗೆ ಸಿಲುಕಿ ಬೃಹತ್ ಕ್ರೇನೊಂದು ಮಕ್ಕಾದ ಮಸ್ಜಿದುಲ್ ಹರಂ ಮೇಲೆ ಬಿದ್ದು 107 ಮಂದಿ ಮೃತಪಟ್ಟಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸುತ್ತಿದ್ದ ಸೌದಿ ಬಿನ್‌ಲಾದಿನ್ ಗ್ರೂಪ್‌ಗೆ ನೂತನ ಸರಕಾರಿ ಗುತ್ತಿಗೆಗಳನ್ನು ನೀಡುವುದರ ಮೇಲೆ ಸರಕಾರ ನಿಷೇಧ ಹೇರಿತ್ತು.

ಈಗ, ಸರಕಾರಿ ಗುತ್ತಿಗೆಗಳಿಗೆ ಮತ್ತೆ ಬಿಡ್ ಸಲ್ಲಿಸಲು ಕಂಪೆನಿಗೆ ಅವಕಾಶ ನೀಡುವ ಹಾಗೂ ಕಂಪೆನಿಯ ಉನ್ನತ ಮ್ಯಾನೇಜರ್‌ಗಳಿಗೆ ವಿಧಿಸಲಾಗಿದ್ದ ಪ್ರಯಾಣ ನಿರ್ಬಂಧವನ್ನು ತೆರವುಗೊಳಿಸುವ ರಾಜಾದೇಶವೊಂದು ಕಂಪೆನಿಗೆ ತಲುಪಿದೆ ಎಂದು ಮೂಲವೊಂದನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News