×
Ad

ಪೊಲೀಸರಿಂದ ಯುವಕರ ಮೇಲೆ ಹಲ್ಲೆ ಆರೋಪ: ಕ್ರಮಕ್ಕೆ ಒತ್ತಾಯಿಸಿ ಧರಣಿ

Update: 2016-05-06 22:03 IST

ಚಿಕ್ಕಮಗಳೂರು, ಮೇ 6: ಮರ್ಲೆ ಗ್ರಾಮದಲ್ಲಿ ಇತ್ತೀಚೆಗೆ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸುತ್ತಿದ್ದ ಅದೇ ಗ್ರಾಮದ ಯುವಚೇತನ ಸಂಘದ ಪದಾಧಿಕಾರಿಗಳಾದ ರವಿ ಪ್ರಕಾಶ್ ಮತ್ತು ಚೇತನ್‌ರವರ ಮೇಲೆ ವಿನಾಕಾರಣ ಹಲ್ಲೆ ನಡೆಸಿರುವ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಕೇಶ್ ಹಾಗೂ ಸಿಬ್ಬಂದಿ ವಿನಯ್‌ರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗ್ರಾಮದ ಯುವಕರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.

ಮರ್ಲೆ ಗ್ರಾಮದಲ್ಲಿ ಎ 20ರ ಸಂಜೆ ವೇಳೆಯಲ್ಲಿ ಅಂಬೇಡ್ಕರ್‌ರವರ 125ನೆ ಜನ್ಮ ದಿನಾಚರಣೆ ಆಚರಿಸಲು ಸಿದ್ಧತೆ ನಡೆಸಿರುವ ಸಂದರ್ಭದಲ್ಲಿ ಜಾತ್ರಾ ಬಂದೋಬಸ್ತ್‌ಗೆ ಬಂದಿದ್ದ ಗ್ರಾಮಾಂತರ ಠಾಣಾಧಿಕಾರಿ ರಾಕೇಶ್ ಮತ್ತು ಸಿಬ್ಬಂದಿ ವಿನಯ್ ಎಂಬವರು ಇಬ್ಬರು ಯುವಕರ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಸುಳ್ಳು ಆರೋಪ ಹೊರಿಸಿದ್ದಾರೆ ಎಂದಿದ್ದಾರೆ.

ಇತ್ತೀಚೆಗೆ ಗ್ರಾಮದಲ್ಲಿ ಪೊಲೀಸ್ ಇಲಾಖೆಯ ಕುಮ್ಮಕ್ಕಿನಿಂದಲೇ ಅಕ್ರಮ ಮರಳು ದಂಧೆ ನಡೆಯುತ್ತಿದೆ ಮತ್ತು ಅಕ್ರಮ ಮದ್ಯ ಮಾರಾಟವೂ ನಡೆಯುತ್ತಿದೆ. ಅವರಿಂದ ಪೊಲೀಸರು ಮಾಮೂಲಿ ವಸೂಲಿ ಮಾಡುತ್ತಿದ್ದು, ಅದನ್ನು ಪ್ರಶ್ನಿಸಿದ ಯುವಕರ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿ ರುವುದನ್ನು ಖಂಡಿಸುವುದಾಗಿ ಧರಣಿಕಾರರು ಹೇಳಿದ್ದಾರೆ.

ಧರಣಿಯಲ್ಲಿ ಯುವಚೇತನ ಸಂಘದ ಅಧ್ಯಕ್ಷ ಚಂದ್ರಶೇಖರ್, ಡಿಎಸ್‌ಎಸ್‌ನ ರವಿಪ್ರಕಾಶ್, ಅಣ್ಣಯ್ಯ ರೈತ ಸಂಘದ ಚಂದ್ರಶೇಖರ್, ಮಂಜುನಾಥ್, ಮರ್ಲೆ ಗ್ರಾಪಂ ಸದಸ್ಯ ಧರ್ಮಯ್ಯ, ಉದ್ದೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News