×
Ad

ನಾಳೆ ಶಾಂತೆಯಂಡ ಕಪ್‌ಹಾಕಿ ಫೆನಲ್ ಪಂದ್ಯಾಟ

Update: 2016-05-06 22:05 IST

ಮಡಿಕೇರಿ, ಮೇ 6: ಕೊಡವ ಕುಟುಂಬ ತಂಡಗಳ ನಡುವಿನ ಶಾಂತೆಯಂಡ ಕಪ್ ಹಾಕಿ ಉತ್ಸವದ ಫೈನಲ್ ಪಂದ್ಯಾಟ ಮೇ 8ರಂದು ನಡೆಯಲಿದೆ. ಕೆೇಂದ್ರದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಂಭ್ರಮದ ಸಮಾರೋಪಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಹಾಕಿ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶಾಂತೆಯಂಡ ವೀಣಾ ಅಚ್ಚಯ್ಯ ತಿಳಿಸಿದ್ದಾರೆ.

ಫೀ.ಮಾ.ಕೆ.ಎಂ. ಕಾರ್ಯಪ್ಪಕಾಲೇಜು ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ರಕ್ಷಣಾ ಸಚಿವರು ಅಂದು ಮಧ್ಯಾಹ್ನ 1:30ಕ್ಕೆ ನಗರಕ್ಕೆ ಆಗಮಿಸಲಿದ್ದು, 3 ಗಂಟೆಗೆ ಅಂತಿಮ ಪಂದ್ಯ ಆರಂಭಗೊಳ್ಳಲಿದೆಯೆಂದು ಹೇಳಿದರು.

ಸಮಾರಂಭದಲ್ಲಿ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಕಾನೂನು ಮತ್ತು ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಯುವಜನ ಸೇವಾ ಇಲಾಖಾ ಸಚಿವ ಅಭಯ ಚಂದ್ರ ಜೈನ್, ಸಣ್ಣ ಕೈಗಾರಿಕಾ ಸಚಿವ ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ, ಸಂಸದ ಪ್ರತಾಪ ಸಿಂಹ, ಕೊಡವ ಹಾಕಿ ಉತ್ಸವದ ಸಂಸ್ಥಾಪಕ ಪಾಂಡಂಡ ಕುಟ್ಟಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ವೀಣಾ ಅಚ್ಚಯ್ಯ ಹೇಳಿದರು.

ಶಾಂತೆಯಂಡ ಕುಟುಂಬದ ಪಟ್ಟೆದಾರ ಶಾಂತೆಯಂಡ ಬಿ. ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಅತಿಥಿಗಳಾಗಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಎಂಎಲ್ಸಿ ಸುನೀಲ್ ಸುಬ್ರಮಣಿ, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಮಂಗಳೂರು ವಿವಿ ಉಪ ಕುಲಪತಿ ಡಾ. ಕೆ. ಭೈರಪ್ಪ, ಎಫ್‌ಎಂಕೆಎಂಸಿ ಕಾಲೇಜು ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ, ಒಲಿಂಪಿಯನ್ ಲೆ.ಕ.ಬಿ.ಕೆ. ಸುಬ್ರಮಣಿ, ಇಬ್ನಿಸ್ಪಾ ರೆಸಾರ್ಟ್‌ನ ಕ್ಯಾಪ್ಟನ್ ಸೆಬಾಸ್ಟಿಯನ್, ಕಾವೇರಿ ಗ್ರೂಪ್ಸ್‌ನ ಪೊನ್ನಚೆಟ್ಟೀರ ಅರುಣ್ ಕಾರ್ಯಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಫೈನಲ್ ಪಂದ್ಯ ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, 4:30 ಕ್ಕೆ ಬಹುಮಾನ ವಿತರಣೆ ನಡೆಯಲಿದೆ. ಬಳಿಕ ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆಯೆಂದು ಉತ್ಸವ ಸಮಿತಿಯ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ತಿಳಿಸಿದರು.

ಸಮಿತಿಯ ಪ್ರಮುಖ ನಮೃತಾ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಶಾಂತೆಯಂಡ ಕಿಶೋರ್, ಬೋಪಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News