ಗ್ರಾಮಸ್ಥರೊಂದಿಗೆ ವರ್ತನೆ ಪಾರದರ್ಶಕವಾಗಿರಲಿ: ಶಾಸಕ ಬಿ.ವೈ ರಾಘವೇಂದ್ರ
ಶಿಕಾರಿಪುರ, ಮೇ 6: ಬರಗಾಲದಿಂದ ಗ್ರಾಮೀಣ ಜನತೆ ತತ್ತರಿಸಿದ್ದು ಗ್ರಾಮಸ್ಥರ ಜೊತೆ ಅಧಿಕಾರಿಗಳ ವರ್ತನೆ ಪಾರದರ್ಶಕವಾಗಿರಬೇಕು. ಈ ದಿಸೆಯಲ್ಲಿ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಮಧ್ಯೆ ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರು ಸೇತುವೆಯಾಗಿ ಕಾರ್ಯನಿರ್ವಹಿಸಬೇಕೆಂದು ಶಾಸಕ ಬಿ.ವೈ ರಾಘವೇಂದ್ರ ತಿಳಿಸಿದರು.
ಶುಕ್ರವಾರ ತಾಲೂಕಿನ ಬೇಗೂರು, ಬಗನಕಟ್ಟೆ, ಮಾರವಳ್ಳಿ, ಮುದ್ದನಹಳ್ಳಿ, ಹೊಸೂರು, ಗೊಗ್ಗ, ಕಾಗಿನಲ್ಲಿ, ಜಕ್ಕಿನಕೊಪ್ಪ ಗ್ರಾಮಗಳಲ್ಲಿನ ಬರಗಾಲ ವಸ್ತುಸ್ಥಿತಿ ಅಧ್ಯಯನ ಹಾಗೂ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ದಿಸೆಯಲ್ಲಿ ಹಮ್ಮಿಕೊಳ್ಳಲಾದ ಎರಡನೇ ಹಂತದ ಪ್ರವಾಸದಲ್ಲಿ ಗ್ರಾಮಗಳಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ಯತ್ನ ನಡೆಸಿದರು.
ಭೀಕರ ಬರಗಾಲದಿಂದ ರೈತರ ಸಹಿತ ಗ್ರಾಮಸ್ಥರು, ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಉದ್ಭವಿಸಿದ್ದು,ಕೂಡಲೇ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪ್ರತಿ ಗ್ರಾಮದಲ್ಲಿ ನೀರಿನ ತೊಟ್ಟಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಉದ್ಯೋಗ ಖಾತ್ರಿ ಯೋಜನೆಯ ನಿಧಿಯನ್ನು ಕೆರೆಗಳ ಹೂಳು ತೆಗೆಯಲು ಹಾಗೂ ಪಂಚಾಯತ್ ಅನುದಾನವನ್ನು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಉಪಯೋಗಿಸಿಕೊಳ್ಳಲು ತಿಳಿಸಿದರು.
ಬೇಗೂರು ಗ್ರಾಮದ ಪರಶುರಾಮಪ್ಪ, ಉದ್ಯೋಗ ಖಾತ್ರಿ ಯೋಜನೆ
ುಲ್ಲಿ ಅಡಿಕೆ ತೋಟಕ್ಕೆ ಕ್ರಿಯಾಯೋಜನೆಗಾಗಿ ಕಳೆದ ವರ್ಷ ಪಂಚಾಯತ್‌ಗೆ ಅರ್ಜಿಸಲ್ಲಿಸಿದರೂ ಇಂದಿಗೂ ಅನುಮತಿ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇವಲ ಅಧಿಕಾರಿಗಳ ಸ್ವಾರ್ಥದಿಂದ ರೈತರು ಪರಿತಪಿಸುವುದು ಮಾತ್ರ ತಪ್ಪುತ್ತಿಲ್ಲ ಎಂದು ಅಧಿಕಾರಿಗಳಿಗೆ ಗದರಿದರು. ಈ ಸಂದರ್ಭದಲ್ಲಿ ಬೇಗೂರು ಗ್ರಾಪಂ ಅಧ್ಯಕ್ಷೆ ರೇಣುಕಾ ಬಾಯಿ, ಜಿಪಂ ಸದಸ್ಯೆ ಮಮತಾಸಾಲಿ, ತಾಪಂ ಸದಸ್ಯೆ ಕುಸುಮಾ ಬಾಯಿ, ಮುಖಂಡ ಶಾಂತವೀರಪ್ಪಗೌಡ, ನಾಗರಾಜಗೌಡ, ಮೆಸ್ಕಾಂ ಎಇಇ ಪರಶುರಾಮಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ವನಮಾಲಾ,ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜಯಣ್ಣ, ತಾಲೂಕು ವೈದ್ಯಾಧಿಕಾರಿ ಮಂಜುನಾಥ, ನೀರಾವರಿ ಇಲಾಖೆಯ ವಿಷ್ಣು ತಾಳೇಕರ್, ಸಹಾಯಕ ಕೃಷಿ ನಿರ್ದೇಶಕ ಡಾ.ಪ್ರಭಾಕರ್, ಜಿಲ್ಲಾ ಜಾಗೃತ ಸಮಿತಿಯ ಗುರುಮೂರ್ತಿ ಮತ್ತಿತರರಿದ್ದರು.