×
Ad

ಸಿಇಟಿ ಮೂಲಕವೇ ಸೀಟು ಭರ್ತಿಯಾಗಲಿ: ಮುನೀರ್ ಕಾಟಿಪಳ್ಳ

Update: 2016-05-06 22:19 IST

ಕಾರವಾರ, ಮೇ 6: ಕೇಂದ್ರ ಸರಕಾರ ವಿದ್ಯಾರ್ಥಿಗಳ ಭವಿಷ್ಯ ಕಡೆಗಣಿಸಿ ನೀಟ್‌ವ್ಯವಸ್ಥೆಯನ್ನು ತರಾತುರಿಯಲ್ಲಿ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಕೂಡಲೇ ನೀಟ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಕೈ ಬಿಟ್ಟು ಸಿಇಟಿ ಮೂಲಕವೇ ಮೆಡಿಕಲ್, ಇಂಜಿನಿಯರ್ ಸೀಟುಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಡಿವೈಎಫ್‌ಐನ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದರು.

ಅವರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ನೀಟ್ ಜಾರಿಗೆಯಲ್ಲಿ ಸರಕಾರ ತೋರುತ್ತಿರುವ ಆತುರತೆಯನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದಿದ್ದಾರೆ.

ಶಿಕ್ಷಣ ವ್ಯವಸ್ಥೆ ತಾರತಮ್ಯದಿಂದ ಕೂಡಿದ್ದು, ನೀಟ್ ಪ್ರವೇಶ ಪರೀಕ್ಷೆ ಕೇವಲ ಕಠಿಣವಾದ ಇಂಗ್ಲೀಷ್ ಭಾಷೆಯಲ್ಲಿದೆ. ಇದರಿಂದ ಇಂಗ್ಲೀಷ್ ಭಾಷೆಯಲ್ಲಿ ಹಿಡಿತವಿಲ್ಲದ ಮಕ್ಕಳಿಗೆ ಅನ್ಯಾಯವಾಗಲಿದೆ. ನೀಟ್ ಪ್ರವೇಶ ಪರೀಕ್ಷಾ ವ್ಯವಸ್ಥೆಯಲ್ಲಿ ಮೀಸಲಾತಿ ಬಗ್ಗೆ ಸ್ಪಷ್ಟನೆ ಇಲ್ಲ. ದಲಿತ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವಲ್ಲಿ ಕೇಂದ್ರ ಸರಕಾರ ಗಮನಹರಿಸಬೇಕು ಎಂದರು.

ರಾಜ್ಯ ಸರಕಾರ ಪ್ರಾಥಮಿಕ ಶಿಕ್ಷಣ ಪ್ರವೇಶಾತಿ ದಿನಾಂಕವನ್ನು ಇನ್ನೂ ನಿಗದಿಗೊಳಿಸಿಲ್ಲ. ಆರ್‌ಟಿಇ ಮೂಲಕ ಶಿಕ್ಷಣ ನೀಡಲು ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸದೇ, ವಿಳಂಬಧೋರಣೆ ಅನುಸರಿಸುತ್ತಿದೆ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಅಕ್ರಮವಾಗಿ ದಾಖಲಾತಿ ಮಾಡಿಕೊಳ್ಳುತ್ತಿವೆ. ಪಾಲಕರಿ ಡೊನೇಶನ್ ಮೂಲಕ ಸುಲಿಗೆಗೆ ಅವಕಾಶ ಮಾಡಿಕೊಡಲಾಗಿದೆ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಶಿಕ್ಷಣ ರೆಗ್ಯೂಲೇಟಿಂಗ್ ಪ್ರಾಧಿಕಾರದ ರಚನೆ ತಕ್ಷಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಬಹಳಷ್ಟು ಅವಕಾಶಗಳಿವೆ. ಆದರೆ ಜಿಲ್ಲೆಯ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರು ಪ್ರವಾಸೋದ್ಯಮ ಸಚಿವರಾಗಿದ್ದರೂ ಸಹ ಇಲ್ಲಿ ಪ್ರವಾಸೋದ್ಯಮ ನೀತಿ ಸರಿಯಾಗಿ ಜಾರಿಯಾಗುತ್ತಿಲ್ಲ. ಕೈಗಾರಿಕೆಗಳು ಹೊಸದಾಗಿ ಸ್ಥಾಪನೆ ಯಾಗುವ ಬದಲಿಗೆ ಮುಚ್ಚುತ್ತಿವೆ. ಹೀಗಾಗಿ ಆರ್.ವಿ.ದೇಶಪಾಂಡೆಯವರು ಕೈಗಾರಿಕೆಗಳನ್ನು ಮುಚ್ಚುವ ಮಂತ್ರಿಯಾಗಿ ಪರಿಣಮಿಸಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಡಿವೈಎಫ್‌ಐನ ಜಿಲ್ಲಾ ಸಂಚಾಲಕ ಸ್ಯಾಮ್ಸನ್ ಡಿಸೋಜಾ, ನಾಗಪ್ಪ ನಾಯ್ಕ, ಗಣೇಶ ರಾಠೋಡ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News