×
Ad

ಮೂಡಿಗೆರೆ: ಅಂಬೇಡ್ಕರ್ 125ನೆ ದಿನಾಚರಣೆ

Update: 2016-05-06 22:20 IST

ಮೂಡಿಗೆರೆ, ಮೇ 6: ಮನುವಾದಿ ಸಂವಿಧಾನದಿಂದ ಪ್ರಜಾಪ್ರಭುತ್ವವನ್ನು ಉಳಿಸಲು ಸಾಧ್ಯವಿಲ್ಲ. ಡಾ.ಬಿ.ಆರ್.ಅಂಬೇಡ್ಕರ್‌ರವರ ಮಾನವತಾವಾದಿ ಸಂವಿಧಾನದಿಂದ ದೇಶವನ್ನು ಸುಂದರವಾಗಿ ನಿರ್ಮಿಸಲು ಸಾಧ್ಯವಿದೆ ಎಂದು ಮೈಸೂರಿನ ಉರಿಲಿಂಗಿ ಪೆದ್ದಿ ಮಠ ಮಹಾಸಂಸ್ಥಾನದ ಜ್ಞಾನಪ್ರಕಾಶ ಮಹಾಸ್ವಾಮೀಜಿ ಹೇಳಿದರು.

ಅವರು ತಾಲೂಕು ಛಲವಾದಿ ಮಹಾಸಭಾ ವತಿಯಿಂದ ಅಡ್ಯಂತಾಯ ರಂಗಮಂದಿರದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರರ 125ನೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜಕಾರಣದ ಪಿತಾಮಹ ಅಂಬೇಡ್ಕರ್ ಆಗಿದ್ದಾರೆ. ಅವರ ಸಂವಿಧಾನವನ್ನು ಬಳಿಸಿಕೊಂಡು ಪ್ರಜಾಪ್ರಭುತ್ವದಲ್ಲಿ ಮತ ಚಲಾಯಿಸಲಾಗುತ್ತಿದೆ. 1920ರಲ್ಲಿ ದೇಶದ ಮತದಾರರ ಸಂಖ್ಯೆ 4,016 ಮಾತ್ರವಿತ್ತು. ರಾಜರಿಗೆ, ಮಂತ್ರಿಗಳಿಗೆ ಮತ್ತು ಭೂಮಾಲಿಕರಿಗೆ ಮಾತ್ರ ದೇಶದಲ್ಲಿ ಮತದಾನದ ಹಕ್ಕು ಇತ್ತು. ಮಹಿಳೆಯರಿಗೂ ಮತದಾನ ಹಕ್ಕಿರಲಿಲ್ಲ ಎಂದು ನುಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಹೋರಾಟದ ಫಲವಾಗಿ ಇಂದು ದೇಶದ ಕಟ್ಟ ಕಡೆಯ ಮನುಷ್ಯನಿಂದ ಶ್ರೀಮಂತನವರೆಗೂ ಮತದಾನದ ಹಕ್ಕು ಹಾಗೂ ರಾಜಕೀಯ ಅಧಿಕಾರ ದೊರೆತಿದೆ ಎಂದರು.

ವೇದಿಕೆಯನ್ನು ಉದ್ಘಾಟಿಸಿದ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ನಿವೃತ್ತ ಐಎಎಸ್ ಅಧಿಕಾರಿ, ಚಿತ್ರನಟ ಕೆ.ಶಿವರಾಮ್ ಮಾತನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಕಲಾತಂಡ ಹಾಗೂ ವಾದ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 10 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಯು.ಆರ್.ರುದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಿ.ಬಿ.ನಿಂಗಯ್ಯ, ಎಂಎಲ್ಸಿ ಎಂ.ಕೆ.ಪ್ರಾಣೇಶ್, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಪಾರ್ವತಮ್ಮ, ಜಿಪಂ ಸದಸ್ಯರಾದ ಶಾಮಣ್ಣ, ನಿಖಿಲ್ ಚಕ್ರವರ್ತಿ, ಮುಖಂಡರಾದ ನಾಗರತ್ನ, ಕಾಳಯ್ಯ, ಜಾಕೀರ್ ಹುಸೈನ್, ಲೋಕವಳ್ಳಿ ರಮೇಶ್, ಎಂ.ಎಸ್.ಕೃಷ್ಣ, ಹೆಸಗಲ್ ಗಿರೀಶ್, ವಕೀಲ ಚಂದ್ರು, ಬಿ.ಆರ್.ಸುಬ್ಬಯ್ಯ, ರವೂಫ್‌ಖಾನ್, ಎಂ.ಎಸ್.ಅಶೋಕ್, ಡಾ.ಡಿ.ಆರ್.ಪ್ರೇಮ್‌ಕುಮಾರ್, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರು, ಬೆಂಗಳೂರಿನ ಗುತ್ತಿಗೆದಾರ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News