ಅಲ್ಪಸಂಖ್ಯಾತರಿಗೆ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ

Update: 2016-05-06 16:52 GMT

ಚಿಕ್ಕಮಗಳೂರು, ಮೇ 6: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಚಿಕ್ಕಮಗಳೂರು ಜಿಲ್ಲೆಗೆ ಪ್ರಸಕ್ತ ಸಾಲಿಗೆ ಕೇಂದ್ರ ಕಚೇರಿಯಿಂದ ನಿಗಮದ ವಿವಿಧ ಯೋಜನೆಯಡಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಭೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗದವರಿಗೆ ಸಾಲ ಸೌಲಭ್ಯ ಪಡೆಯಲು ಕ್ಷೇತ್ರವಾರು ಗುರಿ ನಿಗದಿಪಡಿಸಲಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟನೆಯಲ್ಲಿ ತಿಳಿಸಿದೆ.
  2016-17ನೆ ಸಾಲಿಗೆ ವಿವಿಧ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಅಲ್ಪಸಂಖ್ಯಾತ ಜನಾಂಗದವರಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ವಾವಲಂಬನಾ ಮಾರ್ಜಿನ್ ಹಣ (ನಿಗಮ ಮತ್ತು ಬ್ಯಾಂಕ್ ಸಹಯೋಗದೊಂದಿಗೆ) ಸಾಲ ಯೋಜನೆ ಮತ್ತು ಸಹಾಯಧನ ಯೋಜನೆ, ಅರಿವು (ವಿದ್ಯಾಭ್ಯಾಸ ಸಾಲ) ಯೋಜನೆ, ಶ್ರಮಶಕ್ತಿ ಸಾಲ ಯೋಜನೆ, ಕಿರು ಸಾಲ (ಸ್ವ ಸಹಾಯ ಸಂಘಗಳಿಗೆ) ಮತ್ತು ಸಹಾಯಧನ ಯೋಜನೆ, ಗಂಗಾ ಕಲ್ಯಾಣ (ಕೊಳವೆ ಬಾವಿ) ಯೋಜನೆ, ನಿವೇಶನ ಖರೀದಿ ಮತ್ತು ಗೃಹಸಾಲದ ಮೇಲಿನ ಬಡ್ಡಿ ಸಹಾಯಧನ ಯೋಜನೆ, ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆ, ಅರಿವು, ಶ್ರಮಶಕ್ತಿ, ಕಿರು (ಮೈಕ್ರೊ) ಸಾಲ ಮತ್ತು ಸಹಾಯಧನವನ್ನು ನಿಯಮದನ್ವಯ ಒದಗಿಸಲಾಗುವುದು ಎಂದು ತಿಳಿಸಿದೆ.
  
ಅರ್ಜಿದಾರರು ಕನಿಷ್ಠ 15 ವರ್ಷ ಕರ್ನಾಟಕ ರಾಜ್ಯದಲ್ಲಿ ವಾಸವಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ 22,000 ರೂ. ಇಂದ 81,000ರೂ. ವರೆಗೆ ಹಾಗೂ ನಗರ ಪ್ರದೇಶದವರಿಗೆ 22,000 ರೂ. ಇಂದ 1.03 ಲಕ್ಷ ರೂ. ಮೀರಿರಬಾರದು. ಅರಿವು ಯೋಜನೆಯಡಿ ಮಾತ್ರ ಕುಟುಂಬದ ವಾರ್ಷಿಕ ಆದಾಯ 4.50 ಲಕ್ಷ ರೂ. ಮೀರಿರಬಾರದು. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷ ಮತ್ತು ಶೇ 33 ರಷ್ಟು ಮಹಿಳೆಯರಿಗೆ ಮತ್ತು ಶೇ. 3ರಷ್ಟು ಅಂಗವಿಕಲರಿಗೆ ಮೀಸಲಾತಿ ಇರುತ್ತದೆ. ಅರ್ಜಿದಾರರ ತಮ್ಮ ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸಬೇಕು ಮತ್ತು ಅದನ್ನು ಅವರ ಬ್ಯಾಂಕ್‌ನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಬೇಕು. ಈ ಹಿಂದೆ ನಿಗಮದ ಯಾವುದೇ ಯೋಜನೆಗಳಲ್ಲಿ ಸೌಲಭ್ಯವನ್ನು ಪಡೆದವರು ಮತ್ತೆ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ. ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು www.kmdc.kar.nic.in ಅಥವಾ http://kmdc.karnataka.gov.in ವೆಬ್‌ಸೈಟ್‌ನಲ್ಲಿ ಅರ್ಜಿಯನ್ನು ಪಡೆಯಬಹುದಾಗಿದೆ. ಸಾಲದ ಅರ್ಜಿಯನ್ನು ಜೂ. 15ರೊಳಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ 08262-220443ನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News