ಸಚಿವ ಎಚ್.ಕೆ.ಪಾಟೀಲ್ ರಾಜೀನಾಮೆಗೆ ಶೆಟ್ಟರ್ ಆಗ್ರಹ
ಬೆಂಗಳೂರು, ಮೇ 6: ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹಾಗೂ ನೀರಿನ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ ಟೆಂಡರ್‌ನಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಈ ಅವ್ಯವಹಾರಗಳ ಬಗ್ಗೆ ನ್ಯಾಯಾಂಗ ತನಿಖೆ ಸೇರಿದಂತೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಟೆಂಡರ್ ಗೋಲ್‌ಮಾಲ್: ಗ್ರಾಮೀಣ ಪ್ರದೇಶಗಳಲ್ಲಿನ ನೀರಿನ ಪರೀಕ್ಷೆಗೆ 176 ತಾಲೂಕುಗಳಲ್ಲಿ ಪ್ರಯೋಗಾಲಯ ಸ್ಥಾಪಿಸಲು ಒಟ್ಟು 190 ಕೋಟಿ ರೂ. ಮೀಸಲಿಟ್ಟಿದ್ದು, ಟೆಂಡರ್ ಕರೆಯಲಾಗಿದೆ. ಆದರೆ, ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಗೋಲ್‌ಮಾಲ್ ನಡೆದಿದೆ ಎಂದು ದಾಖಲೆಗಳನ್ನು ಬಹಿರಂಗಪಡಿಸಿದರು.
ಪ್ರಯೋಗಾಲಯವೇ ಇಲ್ಲದ ‘ಪ್ರಸಾದ ರಾಯ ಪಾಟಿ’ ಎಂಬ ವ್ಯಕ್ತಿಗೆ 80 ತಾಲೂಕುಗಳಲ್ಲಿನ ಗ್ರಾಮ ಗಳ ನೀರಿನ ಪರೀಕ್ಷೆ ಟೆಂಡ ರ್ ನೀಡಲಾಗಿದೆ. ಆದರೆ,ಆತ ಟೆಂಡರ್ ಪಡೆದ ಬಳಿಕ ಕಂಪೆನಿ ಸ್ಥಾಪಿಸಿದ್ದು, ಟೆಂಡರ್ ಷರತ್ತು ಸಂಪೂ ರ್ಣ ಉಲ್ಲಂಘನೆಯಾಗಿದೆ. ಇದರಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ನಡೆಸಿರುವುದು ಸ್ಪಷ್ಟ ಎಂದು ಗಂಭೀರ ಆರೋಪ ಮಾಡಿದರು.
ಆ ಬಳಿಕ ಎರಡು ಬಾರಿ 20 ಮತ್ತು 46 ತಾಲೂಕು ಗಳು ಸೇರಿದಂತೆ ಒಟ್ಟು 146 ತಾಲೂಕುಗಳಲ್ಲಿ ನೀರಿನ ಪ್ರಯೋಗಾಲಯ ಘಟಕ ಸ್ಥಾಪನೆಗೆ ಗುತ್ತಿಗೆ ನೀಡಲಾಗಿದೆ. ಆದರೆ, ‘ರೇ ಎನ್ವೈರಾನ್ ಏಜೆನ್ಸಿ’ಗೆ ನೀರಿನ ಪರೀಕ್ಷೆಯ ಜ್ಞಾನವೇ ಇಲ್ಲ ಎಂದು ಜಗದೀಶ್ ಶೆಟ್ಟರ್ ದೂರಿದರು.
7 ಬೋರ್‌ವೆಲ್-30 ಸ್ಯಾಂಪಲ್ಸ್: ಇಲ್ಲಿನ ಹಾವೇರಿ ಜಿಲ್ಲೆ ರಾಣಿಬೆನ್ನೂರಿನ ಉಕ್ಕುಂದ ಗ್ರಾಮದಲ್ಲಿ ಕೇವಲ 7 ಕೊಳವೆಬಾವಿಗಳಿವೆ. ಆದರೆ, ‘ರೇ ಎನ್ವೈರಾನ್ ಏಜೆನ್ಸಿ’ 30 ನೀರಿನ ಮಾದರಿ(ಸ್ಯಾಂಪಲ್ಸ್)ಗಳನ್ನು ಸಂಗ್ರಹಿಸಿ ವರದಿ ನೀಡಿದೆ. ಒಂದು ನೀರಿನ ಮಾದರಿ ಪರೀಕ್ಷೆಗೆ 950 ರೂ.ನಂತೆ 28,500 ರೂ.ನ ನಕಲಿ ದಾಖಲೆ ಸೃಷ್ಟಿಸಿ ಲೂಟಿ ಮಾಡಿದೆ ಎಂದು ಅವ್ಯವಹಾರವನ್ನು ಬಹಿರಂಗಪಡಿಸಿದರು.
ಇದೇ ರೀತಿಯಲ್ಲಿ ರಾಜ್ಯದಲ್ಲಿನ ವಿವಿಧ ತಾಲೂಕುಗಳಲ್ಲಿ ನೀರಿನ ಪರೀಕ್ಷೆ ನೆಪದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿದೆ. ಆ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಕೂಡಲೇ ಸ್ಪಷ್ಟಣೆ ನೀಡಬೇಕೆಂದು ಆಗ್ರಹಿಸಿದರು.
ಉದ್ದೇಶಿತ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ 334.88 ಕೋಟಿ ರೂ. ಈವರೆಗೂ ಬಿಡುಗಡೆ ಮಾಡಿದ್ದು, ಆ ಪೈಕಿ 125.80 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೆ, ರಾಜ್ಯಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಚಾರ ಮಾಡಲಾಗುತ್ತಿದೆ.
ಈ ಘಟಕಗಳ ಸ್ಥಾಪನೆ ಹಾಗೂ ನೀರಿನ ಶುದ್ಧಿಕರಣಕ್ಕೆ ಅಳವಡಿಸಿರುವ ಯಂತ್ರಗಳ ಖರೀದಿಯಲ್ಲಿ ಅವ್ಯವಹಾರ, ಸ್ವಜನಪಕ್ಷಪಾತ ನಡೆದಿರುವುದು ಸ್ಪಷ್ಟ. ಆದುದರಿಂದ ಈ ಬಗ್ಗೆಯೂ ತನಿಖೆ ಆಗಬೇಕು. ಆ ಹಿನ್ನೆಲೆಯಲ್ಲಿ ಸಚಿವ ಎಚ್.ಕೆ. ಪಾಟೀಲ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಶಾಸಕರಾದ ಎಸ್.ಆರ್.ವಿಶ್ವನಾಥ್, ಡಾ.ಅಶ್ವತ್ಥ್ು ನಾರಾಯಣ, ವಿಜಯ್‌ಕುಮಾರ್ ಉಪಸ್ಥಿತರಿದ್ದರು.
ಶುದ್ಧ ಸುಳು್ಳ
ಏಳು ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ವಾಗ್ದಾನ ನೀಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್, ಮೂರು ವರ್ಷಗಳಲ್ಲಿ ಕೇವಲ 1,189 ಘಟಕಗಳನ್ನಷ್ಟೇ ಸ್ಥಾಪಿಸಿದ್ದಾರೆ. ಆದರೆ, ಎಲ್ಲ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಶುದ್ಧ ಸುಳ್ಳು ಹೇಳುತ್ತಿದ್ದಾರೆ ಎಂದು ಶೆಟ್ಟರ್ ಟೀಕಿಸಿದರು.